ಯಾದಗಿರಿ | ವಿವಿಧ ಕ್ಷೇತ್ರದ ಸಾಧಕರನ್ನು ಜಿಲ್ಲೆಗೆ ಪರಿಚಯಿಸಿದ ಕೀರ್ತಿ ಸಗರನಾಡು ಪ್ರತಿಷ್ಠಾನಕ್ಕೆ ಸಲ್ಲುತ್ತದೆ : ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್

ಯಾದಗರಿ : ಜಿಲ್ಲೆಯಲ್ಲಿ ಸಾಕಷ್ಟು ಸಾಂಸ್ಕೃತಿಕ ಸಂಘಟನೆಗಳಿವೆ. ಹಲವು ಪ್ರತಿಭೆಗಳು ಅಡಕವಾಗಿವೆ. ಅದರಲ್ಲಿ ಸಗರನಾಡು ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಾಶ್ ಅಂಗಡಿ ಅವರು ವಿಶೇಷವಾಗಿ ಕಾಳಜಿ ವಹಿಸಿ ಅನೇಕ ಪ್ರತಿಭಾವಂತ ವ್ಯಕ್ತಿಗಳನ್ನು ಮುನ್ನಲೆಗೆ ತಂದಿದ್ದಾರೆ ಎಂದು ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಯಾದಗಿರಿ ಹಾಗೂ ಸಗರನಾಡು ಸೇವಾ ಪ್ರತಿಷ್ಠಾನ ಸುರಪುರ ಸಹಯೋಗದಲ್ಲಿ ಯಾದಗಿರಿ ನಗರದ ಜಿಲ್ಲಾ ಕಸಾಪ ಭವನದಲ್ಲಿ ನಡೆದ ʼಗಜಲ್ ಪುಸ್ತಕ ಬಿಡುಗಡೆ ಹಾಗೂ ವಿಶೇಷ ಸನ್ಮಾನ ಕಾರ್ಯಕ್ರಮʼವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ಕ್ಷೇತ್ರದ ಸಾಧಕರನ್ನು ಜಿಲ್ಲೆಗೆ ಪರಿಚಯಿಸಿದ ಕೀರ್ತಿ ಸಗರನಾಡು ಪ್ರತಿಷ್ಠಾನಕ್ಕೆ ಸಲ್ಲುತ್ತದೆ. ಗಜಲ್ ಕುರಿತು ಹೆಚ್ಚು ಆಸಕ್ತಿ ಹೊಂದಿರುವ ನಾನು, ಉದ್ಘಾಟನೆಗಿಂತ ಗಜಲ್ ಗೋಷ್ಠಿಯಲ್ಲಿ ಭಾಗವಹಿಸುವ ಆಸೆಯಿದೆ ಎಂದು ಹೇಳಿದರು.
ಉತ್ಪಲ ಗಜಲ್ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿ ಹಾಗೂ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನುರ ಅವರು, ಗಜಲ್ ಹುಟ್ಟು ಮತ್ತು ಬೆಳವಣಿಗೆಯ ಹಿನ್ನೆಲೆಯನ್ನು ತಿಳಿಸಿ, ಗಜಲ್ ಎಂದರೆ ಒಂದು ರೀತಿಯ ನಶೆಯ ರೂಪವಾಗಿದೆ. ತಟಸ್ಥ ಧ್ಯಾನದ ರೂಪಕವಾದ ಗಜಲ್ ಬರವಣಿಗೆ ಎಲ್ಲರಿಗೂ ಸಿದ್ದಿಸುವುದಿಲ್ಲ ಜಿಲ್ಲೆಯಲ್ಲಿ ಈಗಾಗಲೇ 17 ಗಜಲ್ಕಾರರಿದ್ದಾರೆ ಅವರ ಸಾಲಿಗೆ ಎ.ಕಮಲಾಕರ ಅವರು ಸೇರಲಿದ್ದಾರೆ ಎಂದು ಆಶಯ ವ್ಯಕ್ತಪಿಡಿಸಿದರು.
ಗಜಲ್ಕಾರ ಡಾ ಮಲ್ಲಿನಾಥ ತಳವಾರ ಪುಸ್ತಕ ಪರಿಚಯಿಸಿದರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಸುರಪುರ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಕಾನಿ, ಕಲಬುರಗಿ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಹಣ ಅಧಿಕಾರಿ ಸದಾನಂದ ಪೆರ್ಲ, ಆರೋಗ್ಯ ಇಲಾಖೆ ನಿವೃತ್ತ ಅಧೀಕ್ಷಕ ಗಣೇಶ ಚೆನ್ನಾಕಾರ, ಪ.ಮಾನು ಸಗರ್ ಸೇರಿದಂತೆ ಹಲವರಿದ್ದರು. ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಹಿತಿಗಳು ಸಾಹಿತ್ಯ ಆಸಕ್ತರು, ಪತ್ರಕರ್ತರು ಪಾಲ್ಗೊಂಡಿದ್ದರು, ಕಾರ್ಯಕ್ರಮವನ್ನು ಹಣುಮಂತ್ರಾಯ ದೇವತ್ಕಲ್ ನಿರೂಪಿಸಿದರೆ, ಭೀಮಾಶಂಕರ ಮಂದೇವಾಲ ಪ್ರಾರ್ಥಿಸಿದರು ದುರ್ಗಪ್ಪ ಪೂಜಾರಿ ಸ್ವಾಗತಿಸಿದರು.
ಇತ್ತೀಚೆಗೆ ತುಮಕೂರು ಜಿಲ್ಲೆಯಲ್ಲಿ ನಡೆದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಯಜಮಾನ ಟಿ ನಾರಾಯಣತಪ್ಪ ದತ್ತಿ ಪ್ರಶಸ್ತಿ ಪಡೆದ ಪತ್ರಕರ್ತ ವಿಜಯಭಾಸ್ಕರರೆಡ್ಡಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.







