ಯಾದಗಿರಿ | ಜಿಲ್ಲೆಯ ವಸತಿ ನಿಲಯ, ಆಸ್ಪತ್ರೆಗೆ ಶಶೀಧರ ಕೋಸಂಬೆ ಭೇಟಿ, ಪರಿಶೀಲನೆ
ʼʼವಸತಿ ನಿಲಯ, ಆಸ್ಪತ್ರೆಯಲ್ಲಿ ಸಮಸ್ಯೆಯಾಗದಂತೆ ಕ್ರಮವಹಿಸಿʼʼ

ಯಾದಗಿರಿ: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಯಾದಗಿರಿ ನಗರದಲ್ಲಿರುವ ವಿವಿಧ ವಸತಿ ನಿಲಯ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಯಾವುದೇ ಸಮಸ್ಯೆಯಾಗದಂತೆ ಕ್ರಮವಹಿಸಲು ಕ್ರಮವಹಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೊದಲಿಗೆ ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ ಸಮೀಪದ ಮೆಟ್ರಿಕ್ ನಂತರ ಇಂದಿರಾಗಾಂಧಿ ನರ್ಸಿಂಗ್ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ನಿಲಯದಲ್ಲಿ ವಿದ್ಯಾರ್ಥಿನಿಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ಮಾಡಿದರು.
ಈ ವೇಳೆ ವಿದ್ಯಾರ್ಥಿಗಳು ನಿಲಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೋಸಂಬೆ ಅವರ ಗಮನಕ್ಕೆ ತಂದರು. ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಇರುವುದು, ಶೌಚಾಲಯ ಸ್ವಚ್ಛತೆ ಇಲ್ಲದ, ಊಟ ಸರಿಯಾಗಿ ನೀಡದಿರುವ ಬಗ್ಗೆ ಗಮನಕ್ಕೆ ತಂದರು. ನಂತರ ಹಾಸ್ಟೆಲ್ ನ ಅಡುಗೆ ಕೋಣೆ ಪರಿಶೀಲನೆ ಮಾಡಿ ಅಲ್ಲಿನ ಆಹಾರ ಸಾಮಗ್ರಿಗಳ ಸಂಗ್ರಹ ಪರಿಶೀಲನೆ ಮಾಡಿದರು. ಆಹಾರ ಸಾಮಗ್ರಿಗಳ ಕೊರತೆ ಇರುವುದನ್ನು ಕಂಡು ಗರಂ ಆದರು. ಶೌಚಾಲಯ ಸ್ವಚ್ಚತೆ ಕಾಪಾಡದೇ ನಿರ್ಲಕ್ಷ್ಯ ವಹಿಸಿದ್ದಿರಿ ಎಂದು ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡರು. ಬಿಸಿ ನೀರು ಸರಿಯಾಗಿ ಪೂರೈಕೆಯಾಗದನ್ನು ನೋಡಿದರು. ಈ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗೆ ವಾರ್ಡನ್ ಗೆ ನೊಟೀಸ್ ನೀಡಲು ಸೂಚಿಸಿದರು.
ನಂತರ ಯಾದಗಿರಿ ನಗರದ ಜಿಲ್ಲಾಕ್ರೀಡಾಂಗಣದಲ್ಲಿರುವ ಯುವಜನ ಕ್ರೀಡಾ ಇಲಾಖೆಯ ಜಿಲ್ಲಾ ಕ್ರೀಡಾ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಕ್ರೀಡಾಂಗಣದಲ್ಲಿ ಗಾಜಿನ ಪುಡಿ :
ಜಿಲ್ಲಾಕ್ರೀಡಾಂಗಣಕ್ಕೆ ಭೇಟಿ ನೀಡಿದ ವೇಳೆ ಕ್ರೀಡಾಂಗಣದಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದರು. ಕ್ರೀಡಾಂಗಣದಲ್ಲಿ ಒಡೆದ ಗಾಜಿನ ಪುಡಿ ಹಾಗೂ ಮೊಳೆಗಳು ಬಿದ್ದಿರುವದನ್ನು ನೋಡಿ ಅಧಿಕಾರಿಗೆ ಸ್ವಚ್ಛತೆ ಕಾಪಾಡಲು ಸೂಚಿಸಿದರು. ನೀವು ಉತ್ತಮ ಕೆಲಸ ಮಾಡಿ ಮಾದರಿಯಾಗಬೇಕು ಈ ವೇಳೆ ಅಧಿಕಾರಿಗಳಿಗೆ ತಿಳಿಸಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ :
ಯಾದಗಿರಿ ನಗರದ ತಾಯಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆ ವಾರ್ಡ್ ಪರಿಶೀಲನೆ ಮಾಡಿದರು. ಅಪೌಷ್ಟಿಕತೆ ನಿವಾರಣೆ ಮಕ್ಕಳ ಘಟಕ ಪರಿಶೀಲನೆ ಮಾಡಿ ಮಕ್ಕಳ ದಾಖಲಾಗಿದ್ದು, ಅವರಿಗೆ ನೀಡುತ್ತಿರುವ ಚಿಕಿತ್ಸೆ ಹಾಗೂ ಮಕ್ಕಳ ಸಂಖ್ಯೆ ಕಡಿಮೆ ಇರುವುದಕ್ಕೆ ಕಾರಣದ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರದ ಬಗ್ಗೆ ಪರಿಶೀಲನೆ ಮಾಡಿದರು. ನಂತರ ಆಸ್ಪತ್ರೆ ಯಲ್ಲಿ ಸರಿಯಾಗಿ ಸ್ವಚ್ಛತೆ ಕಾಪಾಡಬೇಕು. ಡ್ರೈನೆಜ್ ನೀರು ಹರಿದು ಹೋಗಲು ಅಗತ್ಯ ಕ್ರಮವಹಿಸಲು ಸೂಚಿಸಿದರು.
ಈ ವೇಳೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಿರ್ಮಲಾ ಸುರಪುರ, ಬಿಸಿಎಂ ಇಲಾಖೆಯ ಡಿಡಿ ಸದಾಶೀವ ನಾರಾಯಣ, ಸಮಾಜ ಕಲ್ಯಾಣ ಇಲಾಖೆಯ ಡಿಡಿ ಚನ್ನಬಸಪ್ಪ, ಡಿಎಚ್ ಓ ಡಾ. ಮಹೇಶ್ ಬಿರಾದಾರ, ಡಾ.ರಿಜ್ವಾನಾ ,ಡಾ.ಕುಮಾರ್ ಅಂಗಡಿ ಸೇರಿದಂತೆ ಅನೇಕರು ಇದ್ದರು.







