ಯಾದಗಿರಿ | ಜಿಲ್ಲಾ ಕ್ರೀಡಾ ವಸತಿ ನಿಲಯಕ್ಕೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮ
ಇಲಾಖೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ: ಅನಿಲ್ ಕುಮಾರ ನಾಯಕ

ಸೈದಾಪುರ : ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ ಎಂಬದು ಅಕ್ಷರಶ ಸತ್ಯ. ಆದ್ದರಿಂದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇಲಾಖೆಯ ಸೌಲಭ್ಯವನ್ನು ಪ್ರತಿಯೊಬ್ಬರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಭಾರಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಅನಿಲ್ ಕುಮಾರ ನಾಯಕ ಅಭಿಪ್ರಾಯಪಟ್ಟರು.
ಪಟ್ಟಣದ ಗುರುಕುಲ ವಿದ್ಯಾಪೀಠ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಜಿಲ್ಲಾ ಪಂಚಾಯಿತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2025-26ನೇ ಸಾಲಿಗೆ 5ನೇ ತರಗತಿಯ ವಿದ್ಯಾರ್ಥಿಗಳನ್ನು ಜಿಲ್ಲಾ ಕ್ರೀಡಾಂಗಣ ವಸತಿ ನಿಲಯಕ್ಕೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಸತಿ ನಿಲಯಕ್ಕೆ ಆಯ್ಕೆಯಾದ ಮಕ್ಕಳಿಗೆ ಉಚಿತ ಊಟ, ವಸತಿ, ತರಬೇತಿ ಸೇರಿದಂತೆ ಕ್ರೀಡೆಗೆ ಬೇಕಾದ ಸಕಲ ಸೌಲಭ್ಯಗಳನ್ನು ಸರ್ಕಾರ ನೀಡಲಾಗುವುದು. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಈ ಸೌಲಭ್ಯವನ್ನು ಪಡೆದುಕೊಂಡು ಜಿಲ್ಲಾ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ನಿಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿಲು ಇದೊಂದು ಸದಾವಕಾಶ ನಿಮಗೆ ಒದಗಿ ಬಂದಿದೆ ಎಂದರು.
ಇದಕ್ಕೂ ಮೊದಲು ಬಾಲಚೇಡ, ಕಣೇಕಲ್, ಚಿನ್ನಕಾರ, ಬೆಳಗುಂದಿ, ಕ್ಯಾತನಾಳ, ಡಿಡಿಯು, ಬಾಲಾಜಿ, ನೇತಾಜಿ, ಸೈದಾಪುರ, ಕೂಡ್ಲೂರು, ಕಡೇಚೂರು ಗ್ರಾಮಗಳ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಅಥ್ಲೇಟಿಕ್ಸ್, ವಾಲಿಬಾಲ್ ಕ್ರೀಡೆಗಳಿಗಾಗಿ ವಿದ್ಯಾರ್ಥಿಗಳ ಎತ್ತರಕ್ಕೆ ಅನುಗುಣವಾಗಿ ತೂಕ ಹೊಂದಿದ್ದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಜು ದೊರೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ತರಬೇತಿದಾರರಾದ ದೊಡ್ಡಪ್ಪ ನಾಯಕ, ಪ್ರಕಾಶ, ದೈಹಿಕ ಶಿಕ್ಷಕರಾದ ಮಾಳಮ್ಮ, ವಿಶ್ವನಾಥ ಕಣೇಕಲ್, ಮಹಿಪಾಲರೆಡ್ಡಿ, ಭೀಮಣ್ಣ, ಮುಖ್ಯ ಗುರುಗಳಾದ ದೇವಪ್ಪ, ಶೃತಿ ಗುಮಡಾಲ್, ಮಲ್ಲಿಕಾರ್ಜುನ, ಸಹ ಶಿಕ್ಷಕರಾದ ತಾಯಪ್ಪ ಸಂಬರ್, ಶಿಲ್ಪಾ ಕಣೇಕಲ್, ಯಲ್ಲಪ್ಪ, ಗುರುಕುಲ ವಿದ್ಯಾಪೀಠ ಸಾಲೆಯ ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.







