Yadagiri | ಸೆ.27ರಂದು ಧಾರವಾಡದಲ್ಲಿ ರಾಜ್ಯಮಟ್ಟದ ಅಭಿನಂದನಾ ಸಮಾರಂಭ : ರಾಜಶೇಖರಗೌಡ ಪಾಟೀಲ್
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ

ಯಾದಗಿರಿ: ಕರ್ನಾಟಕ ರಾಜ್ಯ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರಡ್ಡಿ ಸಮಾಜ (ರಿ) ಬೆಂಗಳೂರು ಹಾಗೂ ಧಾರವಾಡ ಸಮಾಜದ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 27ರಂದು ಧಾರವಾಡದಲ್ಲಿ ನಡೆಯಲಿರುವ ರಾಜ್ಯಮಟ್ಟದ ಅಭಿನಂದನಾ ಸಮಾರಂಭದಲ್ಲಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಮಾಜದ ಜಿಲ್ಲಾಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ್ ಮನವಿ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡದ ಸತ್ತೂರಿನ ವೀರೇಂದ್ರ ಹೆಗಡೆ ಕಲಾಕ್ಷೇತ್ರದಲ್ಲಿ ಭಾನುವಾರ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ್, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಸೇರಿದಂತೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಗಣ್ಯರನ್ನು ಅಭಿನಂದಿಸಲಾಗುವುದು ಎಂದು ಹೇಳಿದರು.
ಶಿರಹಟ್ಟಿಯ ಫಕೀರೇಶ್ವರ ಭಾವೈಕ್ಯತೆ ಪೀಠದ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಹಾಗೂ ಶಾಸಕ ಶರಣಬಸಪ್ಪ ದರ್ಶನಾಪೂರ, ಶಾಸಕ ಸಿ.ಎಸ್. ನಾಡಗೌಡ, ಶಾಸಕ ಹಂಪಣ್ಣಗೌಡ ಬಾದರ್ಲಿ, ಮಾಜಿ ಸಚಿವರಾದ ಡಾ. ಎ.ಬಿ. ಮಾಲಕರಡ್ಡಿ, ಬಸವರಾಜ ಪಾಟೀಲ್ ಅನ್ವರಿ, ವೆಂಕಟರಾವ ನಾಡಗೌಡ, ಎಸ್.ಆರ್. ಪಾಟೀಲ್, ಅಮರೇಗೌಡ ಪಾಟೀಲ್ ಬಯ್ಯಾಪೂರ, ಹಾಲಪ್ಪ ಆಚಾರ್, ಶಾಸಕರಾದ ಚನ್ನಾರಡ್ಡಿ ಪಾಟೀಲ್ ತುನ್ನೂರ, ಶರಣಗೌಡ ಕಂದಕೂರ, ಸಮಾಜದ ರಾಜ್ಯಾಧ್ಯಕ್ಷ ಶೇಖರಗೌಡ ಪಾಟೀಲ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಸಮಾಜದ ವತಿಯಿಂದ ಶಿಕ್ಷಣ, ಸಾಮಾಜಿಕ, ಧಾರ್ಮಿಕ ಹಾಗೂ ಇತರ ಕ್ಷೇತ್ರಗಳಲ್ಲಿ ಕೈಗೊಳ್ಳಲಾಗುತ್ತಿರುವ ಚಟುವಟಿಕೆಗಳ ಕುರಿತು ಹಿರಿಯರು ಮತ್ತು ಯುವಕರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದರು.
ಜಿಲ್ಲೆಯಲ್ಲಿ ಸಮಾಜದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಉಳಿದ ಪದಾಧಿಕಾರಿಗಳ ನೇಮಕಾತಿ ಮಾಡಿ, ಸಂಘಟನಾ ಚಟುವಟಿಕೆಗಳನ್ನು ವಿಸ್ತರಿಸಲಾಗುವುದು. ಇತರ ಸಮುದಾಯಗಳೊಂದಿಗೆ ಪ್ರೀತಿ, ವಿಶ್ವಾಸ ಮತ್ತು ಸಾಮರಸ್ಯದ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ರಾಜಶೇಖರಗೌಡ ಪಾಟೀಲ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಹಿರಿಯ ಮುಖಂಡರಾದ ರಾಚನಗೌಡ ಮುದ್ನಾಳ, ಭೀಮಣ್ಣಗೌಡ ಕ್ಯಾತನಾಳ, ಬಾಬುಗೌಡ ಪಾಟೀಲ್ ಅಗತೀರ್ಥ, ಬಸಣ್ಣಗೌಡ ವಠಾರ್ ರಾಜನಕೋಳೂರ, ಪ್ರಕಾಶರಡ್ಡಿ ಗೌಡ ಮುದನೂರ, ಸಿದ್ದುಗೌಡ ಕಾಮರಡ್ಡಿ ಚಟ್ನಳ್ಳಿ, ವಿರುಪಾಕ್ಷಯ್ಯಸ್ವಾಮಿ ಉಪಸ್ಥಿತರಿದ್ದರು,






