ಯಾದಗಿರಿ | ಮಾಜಿ ಶಾಸಕ ಲಿಂ.ನಾಗನಗೌಡ ಕಂದಕೂರ ಅವರ ಪ್ರಥಮ ಪುಣ್ಯಸ್ಮರಣೆ
ಬೃಹತ್ ರಕ್ತದಾನ ಶಿಬಿರ

ಯಾದಗಿರಿ : ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ಹಾಗೂ ಸರಳ ರಾಜಕಾರಣಿಯಾಗಿದ್ದ ಮಾಜಿ ಶಾಸಕ ಲಿಂ.ನಾಗನಗೌಡ ಕಂದಕೂರ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ಗುರಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿ ಮಂಗಳವಾರ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಸಾಂಪ್ರದಾಯಿಕವಾಗಿ ನೆರವೇರಿತು.
ಹೊತ್ತೇಳುವ ಮುನ್ನವೇ ಯಾದಗಿರಿ, ಕಲಬುರಗಿ, ರಾಯಚೂರು ಮತ್ತು ಗುರಮಠಕಲ್ ಕ್ಷೇತ್ರದಿಂದ ನಾಗನಗೌಡರ ಅಭಿಮಾನಿಗಳು ಕಂದಕೂರ ಅವರ ತೋಟಕ್ಕೆ ಸಾಗರೋಪಾದಿಯಲ್ಲಿ ಜನ ಹರಿದು ಬಂದಿತ್ತು. ಕಂದಕೂರ ಅವರ ಪಾವನ ಸಮಾಧಿಗೆ ಕಂದಕೂರ ಕುಟುಂಬಸ್ಥರಿಂದ ವಿವಿಧ ಮಠಾಧೀಶರ ನೇತೃತ್ವದಲ್ಲಿ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿತು.
ತ್ರಿವಿಧ ದಾಸೋಹಿ ಸಿದ್ದಗಂಗಾ ಕ್ಷೇತ್ರದ ಪೀಠಾಧಿಪತಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ, ಬದುಕಿನುದ್ದಕ್ಕೂ ನಾಗನಗೌಡರು ನೋವನ್ನು ಅನುಭವಿಸಿ ರಾಜಕೀಯ ಮಾಡಿದವರು. ತನ್ನದಲ್ಲದ ತಪ್ಪಿಗೆ ಅನೇಕ ಕೇಸ್ ಗಳನ್ನು ಮೈಮೇಲೆ ಹಾಕಿಕೊಂಡು ಜನರ ಸೇವೆ ಮಾಡಿಕೊಂಡು ಬಂದಿದ್ದಾರೆ. ಕ್ಷೇತ್ರಕ್ಕೆ ಹಲವು ಜನಪರ ಯೋಜನೆ ಜಾರಿಗೆ ತಂದಿದ್ದಾರೆ ಎಂದು ನುಡಿದರು.
ಶಾಸಕ ಶರಣಗೌಡ ಕಂದಕೂರ ಪ್ರಾಸ್ತಾವಿಕ ಮಾತನಾಡಿ, ಜೀವನದ 75ನೇ ವರ್ಷಕ್ಕೆ ನಮ್ಮ ತಂದೆಯವರು ಶಾಸಕರಾದರು. ಜೀವನದಲ್ಲಿ ಅವರು ಏನಾದರೂ ಗಳಿಸಿದ್ದಾರೆ ಎಂದರೆ ಅದು ಜನರ ಪ್ರೀತಿ ಮತ್ತು ವಿಶ್ವಾಸ. ಪೂಜ್ಯರ ಆಶಿರ್ವಾದ ಮತ್ತು ಕಂದಕೂರ ಅಭಿಮಾನಿಗಳ ನಂಬಿಕೆ ಗಳಿಸಿ ಮುಂದಿನ ದಿನಗಳಲ್ಲಿ ನಾಗನಗೌಡ ಕಂದಕೂರ ಫೌಂಡೇಶನ್ ವತಿಯಿಂದ ಜೀವಿತದ ಕೊನೆವರೆಗೂ ಸಮಾಜಮುಖಿ ಕೆಲಸ ಮಾಡುತ್ತೇವೆ ಎಂದರು.
ಹಡಗಿಮದ್ರಾದ ಶ್ರೀ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ, ಅಬ್ವೆತುಮಕೂರಿನ ಡಾ.ಗಂಗಾಧರ ಸ್ವಾಮಿಗಳು ಮಾತನಾಡಿದರು.
ಶ್ರೀ ಶಾಂತವೀರ ಗುರು ಮುರಘಾರಾಜೇಂದ್ರ ಸ್ವಾಮಿಗಳು, ಡಾ.ಶಿವಾನಂದ ಮಹಾಸ್ವಾಮಿಗಳು ಸೊನ್ನ, ಶ್ರೀ ಶರಭೇಶ್ವರ ಮಹಾಸ್ಮಾಮಿಗಳು ರಸ್ತಾಪುರ, ಶ್ರೀ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು, ಶ್ರೀ ಕೊಟ್ಟೂರೇಶ್ವರ ಸ್ವಾಮಿಗಳು ಯಲ್ಲೇರಿ, ಶ್ರೀ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ತಂಗಡಪಲ್ಲಿ, ಶ್ರೀ ಬಸವಯ್ಯ ಶರಣರು ಚರಬಸವೇಶ್ವರ ಸಂಸ್ಥಾನ ಶಹಾಪೂರ, ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಶ್ರೀ ಸೂಗೂರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಶಹಾಪೂರ, ಹುಲಿಜಂತಿಯ ಮಾಳಿಂಗರಾಯ ಸ್ವಾಮಿಗಳು, ಶ್ರೀ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಕನ್ನೆಕೊಳ್ಳೂರ ಶ್ರೀ ಕ್ಷೀರಲಿಂಗ ಮಹಾಸ್ವಾಮಿಗಳು ಚೇಗುಂಟಾ, ಶ್ರೀ ಗುರುಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಮಠ ಕಡೆಚೂರ, ಶ್ರೀ ನಾಗಪಯ್ಯ ಮಹಾಸ್ಥಾಮಿಗಳು, ಶ್ರೀ ವೀರೇಶ್ವರ ಮಹಾಸ್ವಾಮಿಗಳು ದಾಸಬಾಳ ಮಠ, ಯಾದಗಿರಿ ಶ್ರೀ ಹಿರಗಪ್ಪ ತಾತನವರು ಬೋಜಲಿಂಗೇಶ್ವರ ಮಠ ಇನ್ನಿತರ ಸ್ವಾಮಿಗಳು ಇದ್ದರು.
ಬೃಹತ್ ರಕ್ತದಾನ ಶಿಬಿರ :
ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲೇ ಮಾದರಿ ಎನಿಸುವ ಬೃಹತ್ ರಕ್ತದಾನ ಶಿಬಿರ ಜರುಗಿತು. ನಾಡಿನ ನಾನಾ ಭಾಗದಿಂದ ಆಗಮಿಸಿದ ಯುವಕರು ಶಾಸಕ ಶರಣಗೌಡ ಕಂದಕೂರ ಅವರ ಕರೆಯ ಮೇರೆಗೆ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ನಾಡಿಗೆ ವಿಶೇಷ ಸಂದೇಶ ನೀಡಿದರು. ಸಂಗ್ರಹವಾದ ರಕ್ತವನ್ನು ಯಾದಗಿರಿ ಸರಕಾರಿ ಮೆಡಿಕಲ್ ಕಾಲೇಜು ಮತ್ತು ರೆಡ್ ಕ್ರಾಸ್ ರಕ್ತನಿಧಿ ಘಟಕಕ್ಕೆ ನೀಡಲಾಯಿತು.
ದಾನಗಳಲ್ಲಿ ಅನ್ನದಾನ, ರಕ್ತದಾನ ಮತ್ತು ಗೋದಾನ ಸರ್ವಶ್ರೇಷ್ಠವಾಗಿದ್ದು, ಒಂದೇ ಕಾರ್ಯಕ್ರಮದಡಿ ಈ ಮೂರು ದಾನಗಳನ್ನು ಕಂದಕೂರ ಪರಿವಾರ ನೀಡುವ ಮೂಲಕ ಜನಮಾನಸದಲ್ಲಿ ಉಳಿಯುವಂತೆ ಮಾಡಿದ್ದಾರೆ. ಸಿದ್ದಗಂಗೆಯ ಪೂಜ್ಯ ಶ್ರೀ ಸಿದ್ದಲಿಂಗೇಶ್ಚರ ಸ್ವಾಮೀಜಿಗಳ ಅಮೃತ ಹಸ್ತದಿಂದ ನಾಗನಗೌಡರ ಸಮಾಧಿಗೆ ಮಹಾ ಮಂಗಳಾರತಿ ಜರುಗಿಸಿ, ಪಂಚ ಗೋದಾನ ನೆರವೇರಿಸಿದರು. ಇದೇ ವೇಳೆ ಗುರಮಠಕಲ್ ಕ್ಷೇತ್ರದ ಎಲ್ಲ ಸರಕಾರಿ ಶಾಲೆಗಳಿಗೆ 16 ಸಾವಿರ ಬಿಸಿಯೂಟಕ್ಕಾಗಿ ತಟ್ಟೆ ಮತ್ತು ಲೋಟಗಳನ್ನು ವಿತರಿಸಲಾಯಿತು.
ಅಯುಷ್ಯ ತೀರುವ ಮುನ್ನ ಸಚ್ಚಾರಿತ್ರ್ಯವಾಗಿ ಬಾಳಬೇಕು. ಶಾಸಕ ಶರಣಗೌಡ ಕಂದಕೂರಗೆ ಮುಂದೆ ಉತ್ತಮ ಭವಿಷ್ಯ ಇದೆ.
- ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಸಿದ್ದಗಂಗಾ ಪೀಠಾಧಿಪತಿ







