ಯಾದಗಿರಿ | ಒಳಚರಂಡಿ ನೀರು ಸಂಸ್ಕರಣಾ ಘಟಕದ ಕಾಮಗಾರಿಗೆ ಅಡಿಗಲ್ಲು

ಯಾದಗಿರಿ: ನಗರದ ಬಹುದಿನಗಳ ಬೇಡಿಕೆಯಾಗಿದ್ದ 11.34 ಎಂಎಲ್‌ಡಿ ಸಾಮರ್ಥ್ಯದ ನಗರ ಒಳಚರಂಡಿ ನೀರು ಸಂಸ್ಕರಣಾ ಘಟಕ ಕಾಮಗಾರಿಯನ್ನು ನಿಗದಿತ ಅವಧಿ ಮತ್ತು ಗುಣಮಟ್ಟದಲ್ಲಿ ಮುಗಿಸಬೇಕೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಸಂಬಂಧಪಟ್ಟ ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.
ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಮತ್ತು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಸಂಯುಕ್ತವಾಗಿ ಭಾನುವಾರ ಇಲ್ಲಿನ ಎಸ್‌ಟಿಪಿ (ರೈಲ್ವೆ ಸ್ಟೇಷನ್ ಹಿಂಭಾಗ) ಏರಿಯಾದಲ್ಲಿ ಆಯೋಜಿಸಿದ್ದ 44.14 ಕೋಟಿ ವೆಚ್ಚದ ನಗರ ಮೂಲಸೌಕರ್ಯ ಒಳಚಂರಡಿ ಸಂಸ್ಕರಣಾ ಘಟಕ ನಿರ್ಮಾಣ ಯೋಜನೆಗೆ ಅಡಿಗಲ್ಲ ನೆರವೇರಿಸಿ ಮಾತನಾಡಿದ ಅವರು, ನಗರದ ಒಳಚರಂಡಿ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಪರಿಸರ ಮಾಲಿನ್ಯವನ್ನು ನಿಯಂತ್ರಿಸುವುದು ಹಾಗೂ ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.
ಈ ಬಹುದೊಡ್ಡ ಕಾಮಗಾರಿಯಡಿ ಒಳಚರಂಡಿ ನೀರು ಸಂಗ್ರಹಣೆ ಮತ್ತು ಸಾಗಣೆ, ಎನ್‌ಟಿಪಿ ಘಟಕದ ನಿರ್ಮಾಣ, ಒಳಚರಂಡಿ ನೀರಿನ ವೈಜ್ಞಾನಿಕ ಸಂಸ್ಕರಣೆ, ಹೀಗೆ ಸಂಸ್ಕರಿಸಿದ ನೀರನ್ನು ಸುರಕ್ಷಿತ ವಿಲೇವಾರಿ, ಪುನರ್ಬಳಕೆ ಹಾಗೂ ಸಂಬಂಧಿತ ವಿದ್ಯುತ್, ಯಾಂತ್ರಿಕ ಮತ್ತು ಇತರ ಮೂಲಸೌಕರ್ಯಗಳನ್ನು ಒಳಗೊಂಡಿದೆ ಎಂದು ಶಾಸಕರು ವಿವರಿಸಿದರು.
ಪೌರಾಯುಕ್ತ ಉಮೇಶ ಚವ್ಹಾಣ ಮಾತನಾಡಿ, ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಈ ಕೆಲಸದ ಅವಶ್ಯಕತೆ ಬಹಳ ದಿನಗಳಿಂದಲ್ಲೂ ಇತ್ತು. ಇದನ್ನು ಮನಗಂಡ ಶಾಸಕರು ಸಂಬಂಧಪಟ್ಟ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಸಾಕಷ್ಟು ಸಲ ಚರ್ಚಿಸಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಇದರಿಂದ ನಗರಕ್ಕೆ ಸಾಕಷ್ಟು ಒಳ್ಳೆಯದಾಗಲಿದೆ ಎಂದರು.
ಈ ವೇಳೆ ಯುಡಾ ಅಧ್ಯಕ್ಷ ಬಾಬುರಾವ ಕಾಣ್ಣೂರ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಸಾಹಿಬಣ್ಣಾ ಕೆಂಗೂರಿ, ಎಇಇ ರಾಕೇಶರೆಡ್ಡಿ, ಯೋಜನಾ ವ್ಯವಸ್ಥಾಪಕ ಸತ್ಯನಾರಾಯಣ ಕುಲಕರ್ಣಿ, ಇಂಜಿನಿಯರ ಸುರೇಶ ದೇವಿಕೇರಿ ಹಾಲಗೇರಾ, ಬಸನಗೌಡ ಮಾಲಿಪಾಟೀಲ್ ಬೈಜಬಾಳ, ನಾರಾಯಣರೆಡ್ಡಿ ಪಾಟೀಲ್ ಇದ್ದರು.






