ಯಾದಗಿರಿ | ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೇ ಹತ್ಯೆಗೈದ ಪತ್ನಿ

ಮಾನಪ್ಪ,ಲಕ್ಷ್ಮೀ
ಯಾದಗಿರಿ : ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿಯನ್ನು ಹತ್ಯೆಗೈದು, ಹೃದಯಾಘಾತವಾಗಿದೆ ಎಂದು ಪತ್ನಿಯೇ ಕಥೆ ಕಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ನಡೆದಿದೆ.
ಮಾನಪ್ಪ ಬುಂಕಲದೊಡ್ಡಿ (34) ಹತ್ಯೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ.
ಆರೋಪಿ ಲಕ್ಷ್ಮೀ ಹಾಗೂ ಮಾನಪ್ಪ ಕಳೆದ 15 ವರ್ಷದ ಹಿಂದೆ ಮದುವೆಯಾಗಿದ್ದು, ಕಳೆದ 3-4 ವರ್ಷಗಳಿಂದ ದಂಪತಿಗಳ ನಡುವೆ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಕೆಲವರ ಜೊತೆ ಲಕ್ಷ್ಮೀ ಅಕ್ರಮ ಸಂಬಂಧ ಹೊಂದಿದ್ದು, ಈ ಬಗ್ಗೆ ಗಂಡ ಮಾನಪ್ಪ ಸಾಕಷ್ಟು ಬಾರಿ ಎಚ್ಚರಿಕೆಯನ್ನು ನೀಡಿದ್ದರು. ಆದರೂ ತನ್ನ ಅಕ್ರಮ ಸಂಬಂಧವನ್ನು ಮುಂದುವರೆಸಿದ್ದ ಲಕ್ಷ್ಮೀ ತಡರಾತ್ರಿ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಮಾನಪ್ಪನನ್ನು ಹತ್ಯೆಮಾಡಿದ್ದಾಳೆ ಎಂದು ತಿಳಿದುಬಂದಿದೆ.
ಹತ್ಯೆ ಬಳಿಕ ತನಗೇನು ಗೊತ್ತೇ ಇಲ್ಲ ಎನ್ನುವಂತೆ ಮೃತ ಗಂಡನ ಮುಂದೆ ಕುಳಿತು ಕಣ್ಣೀರು ಹರಿಸಿದ್ದಾಳೆ. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರನ್ನು ನಂಬಿಸಲು ಯತ್ನಿಸಿದ್ದಾಳೆ. ಆದರೆ ಮುಖದ ಮೇಲಿನ ರಕ್ತ ನೋಡಿಯೇ ಊರಿನ ಜನರಿಗೆ ಈಕೆಯ ಮೇಲೆ ಅನುಮಾನ ಹುಟ್ಟಿದೆ. ಇದು ಹೃದಯಘಾತ ಅಲ್ಲ. ಇದೊಂದು ಕೊಲೆ ಎಂದು ಕೂಗಾಡಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಹುಣಸಗಿ ಪೋಲಿಸರು ಭೇಟಿ ನೀಡಿ, ಪ್ರಕರಣದ ಪರಿಶೀಲನೆ ನಡೆಸಿ, ಹುಣಸಗಿ ಪೋಲಿಸ್ ಠಾಣೆಯಲ್ಲಿ ಲಕ್ಷ್ಮೀ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನುಳಿದ ಆರೋಪಿಗಾಗಿ ಪೋಲಿಸರು ಹುಡುಕಾಟ ನಡೆಸಿದ್ದಾರೆ ಎಂದು ಗೊತ್ತಾಗಿದೆ.







