ಯಾದಗಿರಿ : ದೂರು ಸ್ವೀಕರಿಸದಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ ಯುವಕ
ಎಕ್ಸ್ ನಲ್ಲಿ ಪೊಲೀಸ್ ಮಹಾನಿರ್ದೇಶಕರಿಗೆ ಟ್ಯಾಗ್ ಮಾಡಿ ಪೋಸ್ಟ್

ಖಡ್ಗ, ಕೋಡಕಲ್ ಪೊಲೀಸ್ ಠಾಣೆ
ಯಾದಗಿರಿ: ಪೋಲಿಸ್ ಠಾಣೆಯಲ್ಲಿ ದೂರು ಸ್ವೀಕರಿಸದಿದ್ದಕ್ಕೆ ಆಕ್ರೋಶಗೊಂಡಿರುವ ವ್ಯಕ್ತಿಯೋರ್ವ ತನ್ನ ಎದುರಾಳಿಗಳನ್ನು ತಲವಾರ್ನಿಂದ ಕೊಲೆ ಮಾಡುವುದಾಗಿ ಎಕ್ಸ್ನಲ್ಲಿ ಪೋಸ್ಟ್ ಹಾಕಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಟ್ಯಾಗ್ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನಲ್ಲಿ ನಡೆದಿದೆ.
ಹುಣಸಗಿ ತಾಲೂಕಿನ ಬರದೇವನಾಳ ಗ್ರಾಮದ ಶರೀಫ್ ಎಂಬಾತ ಬೆದರಿಕೆ ಪೋಸ್ಟ್ ಮಾಡಿದ್ದಾನೆ. ತಮ್ಮ ಗ್ರಾಮದಲ್ಲಿ ಮನೆ ಕಟ್ಟಿಸುತ್ತಿರುವುದಕ್ಕೆ ಗ್ರಾಮದ ಕೆಲವರು ಅಡಚಣೆ ಮಾಡುತ್ತಿದ್ದಾರೆ ಎಂದು ಆತ ಆರೋಪಿಸಿದ್ದಾನೆ.
ನಮ್ಮ ಮನೆಯ ಎಲ್ಲಾ ದಾಖಲೆ ಸರಿಯಾಗಿದ್ದರೂ ನಮಗೆ ಅಡಚಣೆ ಮಾಡುತ್ತಿದ್ದಾರೆ. ಈ ಸಂಬಂಧ ನಮ್ಮ ತಂದೆ ಕಳೆದ ಒಂದು ತಿಂಗಳಿನಿಂದ ಪೊಲೀಸ್ ಠಾಣೆಗೆ ಅಲೆದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ದೂರು ದಾಖಲಿಸಿಕೊಳ್ಳುವಂತೆ ಮನವಿ ಮಾಡಿಕೊಂಡರೂ ಅಲ್ಲಿ ಯಾರು ಸ್ಪಂದಿಸುತ್ತಿಲ್ಲ ಎಂದು ಯುವಕ ಆರೋಪಿಸಿದ್ದಾನೆ.
"ಸುರಪುರ ಶಾಸಕರ ಪಿಎ ಪೊಲೀಸರಿಗೆ ಕರೆ ಮಾಡಿ ಹೇಳಿದ್ದಕ್ಕೆ ದೂರು ಪಡೆಯುತ್ತಿಲ್ಲ. ಒಂದು ವೇಳೆ ನೀವು ದೂರು ಪಡೆಯದಿದ್ದರೆ ಈ ತಲ್ವಾರ್ ನಿಂದ ಕೊಲೆ ಮಾಡುತ್ತೇನೆ" ಎಂದು ಶರೀಫ್ ಪೋಸ್ಟ್ ಮಾಡಿದ್ದು, ಜೊತೆಗೆ ಖಡ್ಗಗಳ ಫೋಟೋವನ್ನು ಪೋಸ್ಟ್ ಮಾಡಿ ಪೊಲೀಸ್ ಮಹಾನಿರ್ದೇಶಕರಿಗೆ ಟ್ಯಾಗ್ ಮಾಡಿದ್ದಾನೆ.
ಮನೆ ಕಟ್ಟುವ ಸಂದರ್ಭದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿ ಜಾಗದಲ್ಲಿ ಸಮಸ್ಯೆ ಉಂಟಾಗಿ ಪಕ್ಕದ ಮನೆಯವರ ಜೊತೆಗೆ ತಿಂಗಳಿಂದ ಜಗಳ ಮಾಡಿಕೊಂಡಿದ ಶರೀಫ್ ನಮ್ಮ ಪೊಲೀಸ್ ಠಾಣೆಗೆ ದೂರು ಕೊಡಲು ಬಂದಿದ್ದರು. ನಾವು ಇಬ್ಬರನ್ನು ಠಾಣೆಗೆ ಕರೆಸಿ ತಿಳಿ ಹೇಳಿ ಕಳುಹಿಸಿದ್ದೆವು. ಆದರೂ ಈ ಶರೀಫ್ ಅನ್ನುವ ಯುವಕ ಈ ರೀತಿ ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದು ಎದುರಾಳಿಯನ್ನು ಕೊಲೆ ಮಾಡುತ್ತಿನಿ ಎಂದು ಎಕ್ಸ್ನಲ್ಲಿ ಪೋಸ್ಟ್ ಹಾಕಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಟ್ಯಾಗ್ ಮಾಡಿದ್ದಾರೆ. ಅವರ ಮೇಲೆ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದೇವೆ.
-ಅಯ್ಯಪ್ಪ ಪಿಎಸ್ಐ ಕೋಡಕಲ್
ನಮ್ಮ್ ಮನೆಯ ಎಲ್ಲಾ ಧಾಖಲೆ ಇದೆ ನಮ್ಮ್ ಮನೆ ಕಟ್ಟುತಿರುವಾಗ ಜೀವ ಬೆದರಿಕೆ ಹಾಕತಾರನಾವು police station complaint ಕೊಡೋಕೆ ಹೋದ್ರೆ ಅಲ್ಲಿ ಯಾರು ಕೇರ್ ಮಾಡಲ್ಲ Station ಗೆ MLA P. A ಯಿಂದ ಹೇಳ್ತೆಸರ police ಯಾರು ಕೇರ್ ಮಾಡಲ್ ಅದ್ಕೆ ನಾ ಇದೆ ತಲ್ವಾರ್ ಯಿಂದ ಮರ್ಡರ್ ಮಾಡತೀನಿ ಇಲ್ಲಾ FIR ತೊಗೋಳಿ pic.twitter.com/Fwc1sbWrhw
— shareef (@LoverBoy1381979) January 19, 2025







