ಯಾದಗಿರಿ | ಕಳ್ಳತನ ಪ್ರಕರಣ : ನಾಲ್ವರು ಆರೋಪಿಗಳು ವಶಕ್ಕೆ

ಸುರಪುರ : ತಾಲೂಕಿನ ಜಾಲಿಬೆಂಚಿ ಹಾಗೂ ದೇವಾಪುರ ಗ್ರಾಮಗಳಲ್ಲಿ ನಡೆದ ಕಳ್ಳತನ ಪ್ರಕರಣ ಬೇಧಿಸಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ಕಳ್ಳತನ ಮಾಡಲಾದ ಮಾಲುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಜಾಲಿಬೆಂಚಿ ಗ್ರಾಮದಲ್ಲಿ ಕಳೆದ ಜ.19 ರಂದು ರಾತ್ರಿ ಜಾನಕಿದೇವಿ ಭೀಮಣ್ಣ ರಾಠೋಡ್ ಎನ್ನುವವರ ಜಮೀನಿನಲ್ಲಿಯ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಅಳವಡಿಸಲಾಗಿದ್ದ 25 ಕೆವಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಹಾಗೂ ವಿದ್ಯುತ್ ಕಂಬಕ್ಕೆ ಹಾಕಲಾಗಿದ್ದ ವಾಯರ್ ಮತ್ತು ಕಬ್ಬಿಣದ ಪಟ್ಟಿಗಳ ಕಳ್ಳತನವಾಗಿರುವ ಕುರಿತು ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮಲ್ಲಣ್ಣ ಚಿಂಚಗುಂಟಿ ಹಾಗೂ ಮೌನೇಶ ಚಿಂಚಗುಂಟಿ ಎನ್ನುವ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಅವರಿಂದ ವಿದ್ಯುತ್ ಪರಿವರ್ತಕ, ವಯರ್ ಹಾಗೂ ಕಬ್ಬಿಣದ ಪಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ತಾಲೂಕಿನ ದೇವಾಪುರ ಗ್ರಾಮದಲ್ಲಿ ನಾಗರಾಜ ಮದ್ರಕಿ ಎನ್ನುವವರ ಮನೆಯ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಟ್ರ್ಯಾಂಕ್ಟರ್ ಟ್ರಾಲಿ ಡಿ.24ರ ರಾತ್ರಿ ಕಳ್ಳತನ ನಡೆದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಹಣಮಂತ ಜಾಲಹಳ್ಳಿ ಹಾಗೂ ಅನಿಲಕುಮಾರ ಹಿಟ್ನಾಕರ್ ಕೂಡಲೂರ ಎನ್ನುವ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಟ್ರಾಲಿ ಕಳ್ಳತನ ಮಾಡಿರುವುದು ಒಪ್ಪಿಕೊಂಡಿದ್ದು, ಇವರಿಂದ ಟ್ರಾಲಿ ವಶಪಡಿಸಿಕೊಳ್ಳಲಾಗಿದೆ.
ಈ ಎರಡು ಕಳ್ಳತನ ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾದ ವಸ್ತುಗಳನ್ನು ನಗರದ ಪೊಲೀಸ್ ಠಾಣೆಯ ಆವರಣದಲ್ಲಿ ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಜಾವಿದ್ ಇನಾಂದಾರ್, ಪೊಲೀಸ್ ಇನ್ಸ್ಪೆಕ್ಟರ್ ಆನಂದ ವಾಗಮೊಡೆ, ಪಿಎಸ್ಐ ಸಿದ್ದಣ್ಣ ಯಡ್ರಾಮಿ ಉಪಸ್ಥಿತರಿದ್ದರು. ಎರಡು ಪ್ರಕರಣ ಬೇಧಿಸಿರುವ ಪೊಲೀಸರ ತಂಡಕ್ಕೆ ಎಸ್ಪಿ ಪೃಥ್ವಿಕ್ ಶಂಕರ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.







