ಯಾದಗಿರಿ | ಆನೆಕಾಲು ರೋಗ ನಿವಾರಣೆಗೆ ಅರ್ಹರು ತಪ್ಪದೆ ಮಾತ್ರೆ ಪಡೆಯಿರಿ ; ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು

ಯಾದಗಿರಿ : ಇಂದಿನಿಂದ ಫೆ.28 ರವರೆಗೆ ಆನೆಕಾಲು ರೋಗ ನಿವಾರಣೆಗಾಗಿ ಜಿಲ್ಲೆಯ ವಡಗೇರಾ ಬ್ಲಾಕ್ ನಲ್ಲಿ ಸಾಮೂಹಿಕ ಔಷಧಿ ನುಂಗಿಸುವ (ಕಾರ್ಯಕ್ರಮ) ಹಮ್ಮಿಕೊಂಡಿದ್ದು, ಮುನ್ನೆಚ್ಚರಿಕೆಯಾಗಿ ಅರ್ಹರು ತಪ್ಪದೆ ನಿಗದಿತ ಮಾತ್ರೆ ಪಡೆಯುವಂತೆ ನಗರ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಅವರು ಹೇಳಿದರು.
ಆನೆಕಾಲು ರೋಗ ನಿವಾರಣೆಗೆ ಸಂಬಂಧಿಸಿದಂತೆ ವಡಗೇರಾ ಬ್ಲಾಕ್ ನಲ್ಲಿ ಸಾಮೂಹಿಕ ಔಷಧಿ ನುಂಗಿಸುವ ಕಾರ್ಯಕ್ರಮದ ಅಂಗವಾಗಿ ನಾಯ್ಕಲ್ ಗ್ರಾಮ ಪಂಚಾಯತ್ ಆವರಣದಲ್ಲಿ ಇಂದು ಶಾಲಾ ಮಕ್ಕಳಿಗೆ ನಿಗದಿತ ಮಾತ್ರೆ ನುಂಗಿಸಿ, ತಾವೂ ನುಂಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆನೆಕಾಲು ರೋಗ ಸೋಂಕಿತ ಕ್ಯೂಲೆಕ್ಸ್ ಸೊಳ್ಳೆಗಳು ಕಚ್ಚುವುದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಒಮ್ಮೆ ಈ ರೋಗ ಬಂದಲ್ಲಿ ಗುಣಮುಖ ಕಷ್ಟಸಾಧ್ಯ, ಕಾರಣ ವರ್ಷ ಕ್ಕೊಮ್ಮೆ ಉಚಿತವಾಗಿ ಐವರ್ ಮೆಕ್ಟಿನ್, ಡಿ.ಇ.ಸಿ, ಆಲ್ಬೆಂಡಜೋಲ್, ತ್ರಿವಳಿ ಗುಳಿಗೆಗಳನ್ನು ನೀಡಲಾಗುತ್ತಿದ್ದು, ಪ್ರತಿ ಕುಟುಂಬದ ಅರ್ಹ ಸದಸ್ಯರು ತಪ್ಪದೆ ಮಾರ್ಗಸೂಚಿ ಅನ್ವಯ ಮಾತ್ರೆಗಳನ್ನು ನುಂಗಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ಮಾತನಾಡಿ, ಅತೀ ಅಪಾಯವುಳ್ಳ ಗ್ರಾಮಗಳಲ್ಲಿ ಯೋಜನಾಬದ್ಧವಾಗಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಕ್ಷೇತ್ರ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ಹಿಸಿ ಗುರಿಗೆ ತಕ್ಕಂತೆ ಅರ್ಹರಿಗೆ ಗುಳಿಗೆ ನುಂಗಿಸಬೇಕು. ಅರ್ಹರು ಈ ಮಾತ್ರೆ ಪಡೆಯಲು ನಿರಾಕರಿಸದಂತೆ ಎಚ್ಚರಿಕೆ ವಹಿಸಬೇಕು. ಒಮ್ಮೆ ಆನೆಕಾಲು ರೋಗ ಬಂದಲ್ಲಿ ನಿವಾರಣೆ ಕಷ್ಟ ಸಾಧ್ಯ, ಜೊತೆಗೆ ಅಂಗವಿಕಲತೆಗೂ ಕಾರಣವಾಗುವದರಿಂದ ನಿರಂತರ ಮನವರಿಕೆ ಮಾಡಿ, ಅರ್ಹರು ಈ ಗುಳಿಗೆಗಳನ್ನು ಪಡೆಯುವಂತೆ ನೋಡಿಕೊಳ್ಳಲು ಸೂಚಿಸಿ, ಜಿಲ್ಲೆಯನ್ನು ಆನೆಕಾಲು ರೋಗ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸುವಂತೆ ಕರೆ ನೀಡಿದರು.
ಮಲೇರಿಯಾ ರೋಗ ನಿಯಂತ್ರಣಾಧಿಕಾರಿ ಡಾ. ಎಮ್.ಎ. ಸಾಜೀದ್ ಅವರು ಮಾತನಾಡಿ, ಐವರ್ ಮೆಕ್ಟಿನ್, ಡಿ.ಇ.ಸಿ ಹಾಗೂ ಆಲ್ಬೆಂಡಜೋಲ್ ತ್ರಿವಳಿ ಗುಳಿಗೆ ಸಂಪೂರ್ಣ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಮೆಹರುನ್ನಿಸಾ ಬೇಗಂ, ಉಪಾಧ್ಯಕ್ಷ ಯಲ್ಲಮ್ಮ, ವಡಗೇರಾ ತಹಶೀಲ್ದಾರ್ ಚಾಪೆಲ್, ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಹೇಶ್ ಬಿರಾದಾರ್, ಮಾಜಿ ಜಿ.ಪಂ ಸದಸ್ಯ ಉಮಾರೆಡ್ಡಿಗೌಡ ಪಾಟೀಲ್,ಶಾಂತರೆಡ್ಡ ದೇಸಾಯಿ, ತಾಲೂಕ ಆರೋಗ್ಯಾಧಿಕಾರಿ (ಪ್ರ), ಡಾ.ರತ್ನಾ, ವಡಗೇರಾ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಜಗನ್ನಾಥರೆಡ್ಡಿ, ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ವಿಬಿಡಿ ಸಮಾಲೋಚಕರು ಬಸವ್ ರಾಜ್ ಕಾಂತಾ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ತುಳಸಿರಾಮ ಚವ್ಹಾಣ ಕಾರ್ಯಕ್ರಮ ನಿರೂಪಿಸಿದರು.







