ಯಾದಗಿರಿ | ಸಾರಿಗೆ ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣ : ಆರೋಪಿಗಳ ಗಡಿಪಾರಿಗೆ ವಿಶ್ವನಾಥ ನಾಯಕ ಆಗ್ರಹ

ಯಾದಗಿರಿ : ಬೆಳಗಾವಿ ಜಿಲ್ಲೆಯ ಬಾಳೆ ಕುಂದ್ರಿ ಗ್ರಾಮದಲ್ಲಿ ಕೆ.ಎಸ್.ಆರ್.ಟಿ.ಸಿ ನಿರ್ವಾಹಕ ಮತ್ತು ಚಾಲಕನ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿ ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಎಸ್ಪಿ ಅವರ ಮೂಲಕ ಗೃಹ ಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಿ.ಎನ್. ವಿಶ್ವನಾಥ ನಾಯಕ ಮಾತನಾಡಿ, ರಾಜ್ಯಾಧ್ಯಕ್ಷ ಬಿ.ಎನ್. ಜಗದೀಶ್ ಸೂಚನೆ ಮೇರೆಗೆ ರಾಜ್ಯಾದ್ಯಂತ ಜಯ ಕರ್ನಾಟಕ ಪ್ರತಿಭಟನೆ ನಡೆಸುತ್ತಿದೆ. ಬೆಳಗಾವಿಯ ಗಡಿ ಭಾಗದಲ್ಲಿ ದಿನೇ ದಿನೇ ಎಂ,ಈ,ಎಸ್ ಮರಾಠಿ ಪುಂಡರ ಹಾವಳಿ ಹೆಚ್ಚಾಗಿದ್ದು, ಕನ್ನಡಿಗರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿದೆ. ನಿನ್ನೆ ಬೆಳಗಾವಿ ಜಿಲ್ಲೆಯ ಬಾಳಕುಂದ್ರಿ ಗ್ರಾಮದಲ್ಲಿ ಬಸ್ ನಿರ್ವಾಹಕ (ಕಂಡಕ್ಟರ್) ಕನ್ನಡದಲ್ಲಿ ಮಾತನಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದಲ್ಲದೆ ಮರಾಠಿ ಭಾಷೆಯಲ್ಲಿ ಮಾತನಾಡುವಂತೆ ಹಲ್ಲೆ ನಡೆಸಿದ್ದು, ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ.
ಕರ್ನಾಟಕದಲ್ಲಿ ಕನ್ನಡಿಗನೆ ಸಾರ್ವಭೌಮ ಎಂದು ರಸ ಋಷಿಗಳು ಬಣ್ಣಿಸಿದ್ದಾರೆ. ಆದರೆ ಬಸ್ಸಿನಲ್ಲಿ ನಿರ್ವಾಹಕ ಕನ್ನಡ ಮಾತನಾಡಿದ್ದಕ್ಕೆ ಪ್ರಯಾಣಿಕ ಮರಾಠಿ ಮಾತನಾಡುವಂತೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದವರಿಗೆ ಸರಿಯಾದ ಪಾಠವನ್ನು ಕಲಿಸಬೇಕು. ಹಲ್ಲೆ ನಡೆಸಿದವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್.ಪಿ. ಪೃಥ್ವಿಕ್ ಶಂಕರ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಭೀಮು ಪೂಜಾರಿ, ಅಶೋಕರಡ್ಡಿ ಯಲ್ಹೇರಿ, ಮಲ್ಲಿಕಾರ್ಜುನ ಹತ್ತಿಕುಣಿ, ರಂಗನಾಥ ನಾಯಕ, ಈಶಪ್ಪ ಕಪನೂರ, ನವಾಜ ಖಾದ್ರಿ, ನಾಗರಾಜ ಸಾಹುಕಾರ, ರಾಜು ಹತ್ತಿಕುಣಿ, ಸುರೇಶ ಕಲ್ ಪಟ್ಟಿ, ಮರಲಿಂಗ ನಕ್ಕಲ್ ಇನ್ನಿತರರು ಇದ್ದರು.







