Yadagiri | ಹಲ್ಲೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಅ.1ರಂದು ವಡಗೇರಾ ಬಂದ್ : ಕಾಶಪ್ಪ ಮಾದಿಗ

ಯಾದಗಿರಿ: ಗುರುಸುಣಗಿ ಬೆಟ್ಟದ ದೇವಸ್ಥಾನ ಆವರಣದಲ್ಲಿ ದಲಿತರ ಮೇಲೆ ನಡೆದಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಾದಿಗ ದಂಡೋರ ಎಂಆರ್‌ಪಿಎಸ್ ಯಾದಗಿರಿ ಜಿಲ್ಲಾ ಸಮಿತಿ ಅ.1ರಂದು ವಡಗೇರಾ ತಾಲೂಕು ಬಂದ್‌ಗೆ ಕರೆ ನೀಡಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಮಿತಿ ಜಿಲ್ಲಾ ಅಧ್ಯಕ್ಷ ಕಾಶಪ್ಪ ಮಾದಿಗ ಹೆಗ್ಗಣಗೆರಾ, ಗುರುಸುಣಗಿ ಬೆಟ್ಟದ ದೇವಸ್ಥಾನ ಆವರಣದಲ್ಲಿ ದಲಿತರ ಮೇಲೆ ನಡೆದಿರುವ ಹಲ್ಲೆ ಖಂಡನೀಯ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಹಾಗೂ ಸಾರ್ವಜನಿಕರ ನಡುವೆ ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಹಾಗೂ ಬಂದೋಬಸ್ತ್ ಕಲ್ಪಿಸಬೇಕು. ತಾಲೂಕಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಂಧನವಾಗದಿದ್ದರೆ ಬಂದ್ :
ಪ್ರಕರಣದಲ್ಲಿ ಬಂಧನವಾಗದೆ ಉಳಿದಿರುವ ಆರೋಪಿಗಳನ್ನು ಕೂಡಲೇ ಬಂಧಿಸದಿದ್ದರೆ ಅ.1ರಂದು ವಡಗೇರಾ ತಾಲೂಕು ಬಂದ್ ನಡೆಸಲಾಗುವುದು ಎಂದು ಕಾಶಪ್ಪ ಮಾದಿಗ ಎಚ್ಚರಿಕೆ ನೀಡಿದರು.






