Yadagiri | ಕೂಲಿ ಕಾರ್ಮಿಕರು ಬೆಂಗಳೂರಿನಲ್ಲಿಯೇ ಪಡಿತರ ಚೀಟಿಯ ಇ-ಕೆವೈಸಿ ಮಾಡಿಸಿ : ಸೋಮಶೇಖರ

ಯಾದಗಿರಿ: ಜಿಲ್ಲೆಯಲ್ಲಿ ಪಡಿತರ ಚೀಟಿ ಇ-ಕೆವೈಸಿಗಾಗಿ ಹೆಚ್ಚುತ್ತಿರುವ ಜನಸಂದಣಿಯ ಹಿನ್ನೆಲೆಯಲ್ಲಿ, ಉದ್ಯೋಗಕ್ಕಾಗಿ ಬೆಂಗಳೂರು ಹಾಗೂ ಇತರ ನಗರಗಳಲ್ಲಿ ನೆಲೆಸಿರುವ ಫಲಾನುಭವಿಗಳು ಅಲ್ಲಿನ ನ್ಯಾಯಬೆಲೆ ಅಂಗಡಿಗಳಲ್ಲಿಯೇ ಇ-ಕೆವೈಸಿ ಮಾಡಿಸಿಕೊಳ್ಳಬಹುದು ಎಂದು ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ ಸಲಹೆ ನೀಡಿದರು.
ನಗರದ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪಡಿತರದಾರರೊಂದಿಗೆ ಮಾತನಾಡಿದ ಅವರು, ಒಂದೇ ದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುವುದರಿಂದ ಎಲ್ಲರ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಸರ್ವರ್ ಸಮಸ್ಯೆಯಿಂದಲೂ ವಿಳಂಬ ಉಂಟಾಗುತ್ತಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು ಸೇರಿದಂತೆ ಬೇರೆ ನಗರಗಳಲ್ಲಿ ವಾಸಿಸುವ ಫಲಾನುಭವಿಗಳು ತಮ್ಮ ನೆಲೆಸಿರುವ ಪ್ರದೇಶದ ನ್ಯಾಯಬೆಲೆ ಅಂಗಡಿಗಳಲ್ಲಿಯೇ ಇ-ಕೆವೈಸಿ ಮಾಡಿಸಿಕೊಳ್ಳಬಹುದು ಎಂದು ಅವರು ಸ್ಪಷ್ಟಪಡಿಸಿದರು.
ಬಳಿಕ ಪಡಿತರದಾರರೊಂದಿಗೆ ಚರ್ಚಿಸಿದ ಸೋಮಶೇಖರ, ಪ್ರತಿ ತಿಂಗಳು ಆಹಾರ ಧಾನ್ಯಗಳು ಸಮರ್ಪಕವಾಗಿ ವಿತರಿಸಲಾಗುತ್ತಿದೆಯೇ ಎಂದು ಮಾಹಿತಿ ಪಡೆದರು. ನ್ಯಾಯಬೆಲೆ ಅಂಗಡಿ ಮಾಲೀಕರು ವಿತರಣೆ ಮಾಡಿದ ಆಹಾರ ಧಾನ್ಯಗಳ ದಾಖಲೆಗಳು ಹಾಗೂ ದಾಸ್ತಾನು ಪರಿಶೀಲಿಸಿ, ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ಪಡಿತರ ವಿತರಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆ ನಿರೀಕ್ಷಕ ವಿಠಲ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.






