ಯಾದಗಿರಿ | ಮಹಿಳೆ ಮೃತ್ಯು : ಖಾಸಗಿ ಆಸ್ಪತ್ರೆಗೆ ಬೀಗ

ಸಾಂದರ್ಭಿಕ ಚಿತ್ರ
ಯಾದಗಿರಿ/ ಶಹಾಪುರ : ನಗರದ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಒಳಗಾದ ಮಹಿಳೆ ದೇವದುರ್ಗದ ಲಕ್ಷ್ಮೀ ಎನ್ನುವವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರಿಂದ ಆಸ್ಪತ್ರೆಗೆ ಬೀಗ ಹಾಕಲಾಗಿದೆ.
ರಾಯಚೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಲಕ್ಷ್ಮೀಯನ್ನು ಶಹಾಪುರ ನಗರದ ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಟಾಫ್ ನರ್ಸ್ ಒಬ್ಬರು ಖಾಸಗಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ್ದಾರೆ ಎಂದು ಗೊತ್ತಾಗಿದೆ.
'ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಯು ಗರ್ಭಕೋಶ ಅಥವಾ ಅಪೆಂಡಿಕ್ಸ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಕೆಲ ದಿನದ ಬಳಿಕ ಅವರು ಮೃತಪಟ್ಟಿದ್ದಾರೆ. ಯಾವ ಕಾರಣದಿಂದ ಅಸುನೀಗಿದ್ದಾರೆ ಎಂಬುವುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಅಲ್ಲದೆ ಮಹಿಳೆಯ ವಯಸ್ಸು ಗೊತ್ತಾಗಿಲ್ಲ' ಎಂದು ಟಿಎಚ್ಒ ಡಾ.ರಮೇಶ ಗುತ್ತೆದಾರ ಮಾಹಿತಿ ನೀಡಿದರು.
'ಮಾಹಿತಿ ತಿಳಿದ ತಕ್ಷಣ ಟಿಎಚ್ಒ ಅವರು ಖಾಸಗಿ ಆಸ್ಪತ್ರೆಯ ವೈದ್ಯರಿಗೆ 14 ದಿನದ ನೋಟಿಸ್ ನೀಡಿ ನಂತರ ಖಾಸಗಿ ಆಸ್ಪತ್ರೆಗೆ ಬೀಗ ಹಾಕಿದೆ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.
'ಮಹಿಳೆ ಸಾವಿನ ಬಗ್ಗೆ ತನಿಖೆ ನಡೆಸಬೇಕು. ಅಲ್ಲದೆ ಮೃತ ಲಕ್ಷ್ಮೀ ಅವರ ಪತಿ ಕೃಷ್ಣಪ್ಪ ಅವರ ಬಗ್ಗೆಯು ಪೊಲೀಸರು ವಿಚಾರಣೆಗೆ ಒಳಪಡಿಸಬೇಕು. ಖಾಸಗಿ ಆಸ್ಪತ್ರೆಯ ವೈದ್ಯರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಮೂಲ ಸೌಲಭ್ಯಗಳಿಲ್ಲದೆ ಆಸ್ಪತ್ರೆಯನ್ನು ನಡೆಸಲು ಪರವಾನಗಿ ನೀಡಿದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಇಂತಹ ಘಟನೆ ಮರು ಕಳುಹಿಸದಂತೆ ಎಚ್ಚರವಹಿಸಬೇಕು' ಎಂದು ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಮೃತಪಟ್ಟಿದ್ದಾರೆ. ಅದರ ಬಗ್ಗೆ ತನಿಖೆ ನಡೆಸುವಂತೆ ಮೇಲಾಧಿಕಾರಿಗೆ ವರದಿ ನೀಡಿಲಾಗಿದೆ. ಖಾಸಗಿ ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ.
-ಡಾ.ರಮೇಶ ಗುತ್ತೆದಾರ, ಟಿಎಚ್ಒ
ಖಾಸಗಿ ಆಸ್ಪತ್ರೆಗಳಿಗೆ ಪರವಾನಗಿಯನ್ನು ಟಿಎಚ್ಒ ಹಾಗೂ ಡಿಎಚ್ಒ ವರದಿ ಆಧಾರದ ಮೇಲೆ ನೀಡುತ್ತಾರೆ. ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ
-ಡಾ.ಯಲಪ್ಪ ಪಾಟೀಲ ಹುಲಕಲ್, ಸರಕಾರಿ ಆಸ್ಪತ್ರೆ ತಾಲ್ಲೂಕು ಆಡಳಿತ ವೈದ್ಯಾಧಿಕಾರಿ.







