ಯಾದಗಿರಿ | ಪೊಲೀಸ್ ಇಲಾಖೆ ಜನಸ್ನೇಹಿಯಾಗಲು ಮಹಿಳಾ, ಮಕ್ಕಳ ಸುರಕ್ಷಾ ಪಡೆ : ಡಿವೈಎಸ್ಪಿ ಜಾವಿದ್

ಯಾದಗಿರಿ : ಮಹಿಳಾ ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಅವರ ಮಾರ್ಗದರ್ಶನದಲ್ಲಿ ́ಪೊಲೀಸ್ ಇಲಾಖೆ ಜನಸ್ನೇಹಿಯಾಗಲು ಮಹಿಳಾ ಮತ್ತು ಮಕ್ಕಳ ಸುರಕ್ಷಾ ಪಡೆʼಯನ್ನು ರಚಿಸಲಾಗಿದೆ ಎಂದು ಡಿವೈಎಸ್ಪಿ ಜಾವಿದ್ ಇನಾಂದಾರ್ ತಿಳಿಸಿದ್ದಾರೆ.
ಸುರುಪುರ ನಗರದ ಪೊಲೀಸ್ ಠಾಣೆಯಲ್ಲಿನ ತಮ್ಮ ಕಚೇರಿ ಆವರಣದಲ್ಲಿ ಸುರಪುರ ಪೊಲೀಸ್ ಉಪ ವಿಭಾಗದ ವತಿಯಿಂದ ಮಹಿಳಾ ಮತ್ತು ಮಕ್ಕಳ ಸುರಕ್ಷಾ ಪಡೆ ರಚಿಸಿ ಮಾತನಾಡಿದ ಅವರು, ಸುರಪುರ ಉಪ ವಿಭಾಗದ ಎಲ್ಲಾ 8 ಪೊಲೀಸ್ ಠಾಣೆಗಳಲ್ಲಿ ಈ ಪಡೆ ಇರಲಿದೆ. ಪ್ರತಿ ಠಾಣೆಯಲ್ಲಿ ಕನಿಷ್ಠ ಇಬ್ಬರು ಗರಿಷ್ಠ ಮೂರು ಅಥವಾ ನಾಲ್ಕು ಜನ ಮಹಿಳಾ ಪೊಲೀಸ್ ಪೇದೆಗಳ ತಂಡ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರನ್ನು ಹಾಗೂ ಶಾಲೆಗಳಲ್ಲಿನ ಹದಿ ಹರೆಯದ ವಿದ್ಯಾರ್ಥಿನಿಯರಿಗೆ ಮಕ್ಕಳ ಹಕ್ಕುಗಳ ಬಗ್ಗೆ ಬಾಲ್ಯ ವಿವಾಹ, ಬೇರೆ ಯಾರಾದರು ತೊಂದರೆ ಕೊಡುತ್ತಿದ್ದರೆ ಅದರಿಂದ ಬಚಾವಾಗುವುದು ಹೇಗೆ ಎನ್ನುವ ಹಲವು ವಿಷಯಗಳ ಕುರಿತು ಈ ತಂಡ ಭೇಟಿ ನೀಡಿ ಜಾಗೃತಿ ಮೂಡಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಾರಾಯಣಪುರ ಠಾಣೆ ಪಿಎಸ್ಐ ರಾಜಶೇಖರ ರಾಠೋಡ ಉಪಸ್ಥಿತರಿದ್ದರು.







