ಯಾದಗಿರಿ | ಜಾಲಿಬೆಂಚಿ-ವಿದ್ಯುತ್ ಅವಘಡದ ಪರಿಹಾರ ವಿತರಣೆಯಲ್ಲಿ ತಾರತಮ್ಯ ಆರೋಪ

ಸುರಪುರ: ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಕಳೆದ ಕೆಲ ದಿನಗಳ ಹಿಂದೆ ವಿದ್ಯುತ್ ಅವಘಡ ಸಂಭವಿಸಿ ಗ್ರಾಮದಲ್ಲಿರುವ ಅನೇಕ ಮನೆಗಳಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಮನೆಯಲ್ಲಿರುವ ವಿದ್ಯುತ್ ಉಪಕರಣಗಳು ಸುಟ್ಟು ಮನೆಗಳಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡು ಅನಾಹುತ ಸಂಭವಿಸಿತ್ತು. ಘಟನೆಯ ಕುರಿತು ಗ್ರಾಮಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ, ಅಂದಿನ ಜಿಲ್ಲಾಧಿಕಾರಿಗಳು ಹಾಗೂ ಜೆಸ್ಕಾಂ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಹಾನಿಗೀಡಾದ ಮನೆಗಳಿಗೆ ಪರಿಹಾರ ನೀಡುವ ಕುರಿತು ಭರವಸೆ ನೀಡಿದ್ದರು.
ಅದರಂತೆ ಪರಿಹಾರ ನೀಡಲಾಗಿದೆ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಹಾನಿಗೀಡಾದ ಮನೆಗಳಿಗೆ ತೀರಾ ಕಡಿಮೆ ಪ್ರಮಾಣದ ಪರಿಹಾರ ಧನ ನೀಡಲಾಗಿದ್ದು,ಕಡಿಮೆ ಹಾನಿಗೊಳಗಾದ ಮನೆಗಳಿಗೆ ಹೆಚ್ಚಿನ ಪರಿಹಾರ ಧನ ನೀಡಲಾಗಿದೆ. ಇದರಿಂದ ನಿಜವಾದ ಸಂತ್ರಸ್ತರಿಗೆ ದೊಡ್ಡ ಹಾನಿಯಾಗಿದೆ. ಆದ್ದರಿಂದ ಮತ್ತೊಮ್ಮೆ ಅಧಿಕಾರಿಗಳು ಹಾನಿಗೀಡಾದ ಮನೆಗಳಿಗೆ ಭೇಟಿ ನೀಡಿ ಪರಿಹಾರದ ವಿತರಣೆಯಲ್ಲಿ ಆಗಿರುವ ತಾರತಮ್ಯ ಸರಿಪಡಿಸಬೇಕು, ಇಲ್ಲವಾದಲ್ಲಿ ಸಂತ್ರಸ್ಥರೊಂದಿಗೆ ಗ್ರಾಮದ ಜನರು ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿ ಗ್ರಾಮಸ್ಥರು ಜೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.







