ಯಾದಗಿರಿ | ಹದಗೆಟ್ಟ ಬಂದಳ್ಳಿ - ಹೊನಿಗೇರಾ ರಸ್ತೆ : ದುರಸ್ತಿ ಮಾಡುವಂತೆ ಕರವೇ ಆಗ್ರಹ

ಯಾದಗಿರಿ: ತಾಲೂಕಿನ ಗುರುಮಠಕಲ್ ಮತಕ್ಷೇತ್ರದ ಬಂದಳ್ಳಿ- ಹೊನಿಗೇರಾ ನಡುವಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಕೂಡಲೇ ಸಂಬಂಧಪಟ್ಟವರು ರಸ್ತೆ ದುರಸ್ತಿಗೆ ಮುಂದಾಗಬೇಕೆಂದು ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ನಾಗಪ್ಪ .ಬಿ ಹೊನಿಗೇರಾ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ನಾಗಪ್ಪ.ಬಿ, ಹೊನಿಗೇರಾ-ಬಂದಳ್ಳಿ ನಡುವೆ ರಸ್ತೆಯು ಹದಗೆಟ್ಟಿದೆ. ದಿನನಿತ್ಯ ಸಾರ್ವಜನಿಕರು ರೈತರು ತಮ್ಮ ಕೆಲಸ ಕಾರ್ಯಗಳಿಗೆ, ಹೊಲ ಗದ್ದೆಗಳಿಗೆ, ಹತ್ತಿರದ ಯಾದಗಿರಿ ಪಟ್ಟಣಕ್ಕೆ ಬರಲು ಹರ ಸಾಹಸ ಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಮಳೆ ನೀರಿನಿಂದ ರಸ್ತೆ ಕೆಸರು ಗದ್ದೆಯಂತಾಗಿದೆ. ನಿತ್ಯ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ತರಕಾರಿ ವ್ಯಾಪಾರಕ್ಕೆಂದು ತೆರಳುವ ರೈತರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಸಂಬಂಧಪಟ್ಟವರು ಗುಣಮಟ್ಟದ ರಸ್ತೆ ನಿರ್ಮಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ನಿರಂತರ ಧರಣಿ ನಡೆಸುವುದಾಗಿ ಹೇಳಿದ್ದಾರೆ.
Next Story





