ಯಾದಗಿರಿ | ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ : ಡಾ.ಭೀಮಣ್ಣ ಮೇಟಿ

ಯಾದಗಿರಿ : ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳಿಗೆ ಮೀಸಲಿಟ್ಟಿರುವ ಹಣವನ್ನು ದುರುಪಯೋಗ ಮಾಡಿಕೊಂಡಿಲ್ಲ. ಬಿಜೆಪಿಯವರು ಸುಳ್ಳು ಆರೋಪ ಮಾಡುವ ಮೂಲಕ ಸಮುದಾಯಗಳನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಡಾ.ಭೀಮಣ್ಣ ಮೇಟಿ ಆರೋಪಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು ಅವರಿಗಾಗಿಯೇ ವ್ಯಯಿಸಲಾಗುತ್ತಿದೆ. ಅನುದಾನ ಖರ್ಚು ಮಾಡದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವ ಅವಕಾಶ ಕೂಡ ಕಾನೂನಿನಲ್ಲಿ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸುಳ್ಳು ಪ್ರಚಾರ ಮಾಡುವುದನ್ನು ಬಿಜೆಪಿಯ ನಾಯಕರು ಮೊದಲು ಬಿಡಬೇಕಿದೆ. ಸರ್ಕಾರದ ವಿರುದ್ಧ ಟೀಕೆ ಮಾಡಲು ಅವರಿಗೆ ನೈತಿಕತೆ ಇಲ್ಲದಂತಾಗಿದೆ. ಹೀಗಾಗಿಯೇ ಮನಸ್ಸಿಗೆ ಬಂದಂತೆ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ಜನರು ತಿರುಗೇಟು ನೀಡಲಿದ್ದಾರೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪಗಂಡದ ಸಮುದಾಯ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬಿಜೆಪಿಯ ಕೊಡುಗೆ ಶೂನ್ಯವಾಗಿದೆ. ಇವರು ಅಧಿಕಾರದಲ್ಲಿ ಇದ್ದಾಗ ಒಂದೇ ಒಂದು ಯೋಜನೆಯನ್ನು ಈ ಸಮುದಾಯಗಳ ಏಳ್ಗೆಗೆ ಘೋಷಣೆ ಮಾಡಿಲ್ಲ ಎಂದು ಆರೋಪಿಸಿದರು.
ಅಧಿಕಾರ ಇದ್ದಾಗ ಬಿಜೆಪಿ ಏನೂ ಮಾಡಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ದಲಿತರ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುತ್ತಿದೆ. ಇದನ್ನು ಸಹಿಸಿಕೊಳ್ಳಲು ಬಿಜೆಪಿ ಆಗುತ್ತಿಲ್ಲ. ಅವರಲ್ಲಿ ತಳಮಳ ಶುರುವಾಗಿದೆ. ಹೀಗಾಗಿಯೇ ಸಮಾಜದಲ್ಲಿ ಕಂದಕ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.







