ಯಾದಗಿರಿ | ಬೈಕಿಗೆ ಬಸ್ ಢಿಕ್ಕಿ: ಮೂವರು ಮಕ್ಕಳ ಸಹಿತ ಒಂದೇ ಕುಟುಂಬದ ಐವರು ಮೃತ್ಯು

ಯಾದಗಿರಿ: ಬೈಕಿಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಮೂವರು ಪುಟಾಣಿ ಮಕ್ಕಳ ಸಹಿತ ಒಂದೇ ಕುಟುಂಬದ ಐವರು ಮೃತಪಟ್ಟ ದಾರುಣ ಘಟನೆ ಸುರಪುರ ತಾಲೂಕಿನ ತಿಂಥಣಿ ಬಳಿ ಇಂದು ಮಧ್ಯಾಹ್ನ ಸಂಭವಿಸಿದೆ.
ತಿಂಥಣಿ ಗ್ರಾಮದ ಕಮಾನ್ ಬಳಿ ಶ್ರೀರಂಗಪಟ್ಟಣ-ಬೀದರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.
ಆಂಜನೇಯ (35), ಗಂಗಮ್ಮ (28), ಅವರ ಪುತ್ರ ಹಣಮಂತ (1), ಆಂಜನೇಯರ ಸಹೋದರನ ಮಕ್ಕಳಾದ ಪವಿತ್ರಾ (5) ಹಾಗೂ ರಾಯಪ್ಪ (3) ಮೃತಪಟ್ಟವರು. ಐವರು ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದರು.
ಲಿಂಗಸೂಗೂರು ಕಡೆಯಿಂದ ಚಿಂಚೋಳಿ ಕಡೆಗೆ ಹೊರಟಿದ್ದ ಸಾರಿಗೆ ಬಸ್ಸೊಂದು ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಲ್ಲಿ ಚಲಿಸುತ್ತಿದ್ದ ಬೈಕಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ರಸ್ತೆಗೆ ಎಸೆಯಲ್ಪಟ್ಟ ಬೈಕಿನಲ್ಲಿದ್ದ ಐವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.
Next Story