ಯಾದಗಿರಿ: ಕಾರು-ಬೈಕ್ ಢಿಕ್ಕಿ; ಇಬ್ಬರು ಮೃತ್ಯು
ಯಾದಗಿರಿ: ಕಾರು ಮತ್ತು ಬೈಕ್ ಢಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಘಟನೆ ಶಹಾಪುರ ತಾಲೂಕಿನ ಮದ್ರಿಕಿ ಗ್ರಾಮದ ಬಳಿ ನಡೆದಿದೆ.
ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದ ನಿವಾಸಿ ಹಳ್ಳೆಪ್ಪ ದೊಡ್ಡನಂದಪ್ಪ (45), ಶಹಾಪುರ ತಾಲೂಕಿನ ವನದುರ್ಗ ಗ್ರಾಮದ ನಿವಾಸಿ ಮಲ್ಲಯ್ಯ ಹಣಮಂತ ಮೃತ ವ್ಯಕ್ತಿಗಳು ಎಂದು ಗುರುತಿಸಲಾಗಿದೆ.
ಬೈಕ್ ಸವಾರರು ಜೇವರ್ಗಿ ತಾಲೂಕಿನ ಚಿಕ್ಕಮುದವಾಳ ಗ್ರಾಮದ ಬಳಿ ಇರುವ ಜಮೀನ್ನು ನೋಡಿಕೊಂಡು ಮರಳಿ ಶಹಾಪುರ ಕಡೆಗೆ ಬರುವಾಗ ಈ ಅಪಘಾತ ಸಂಭವಿಸಿದೆ. ಖಾಸಗಿ ಕಾರೊಂದು ವೇಗವಾಗಿ ಬರುವಾಗ ಓವರ್ ಟೇಕ್ ಮಾಡಲು ಹೋಗಿ ಘಟನೆ ಸಂಭವಿಸಿದೆ.
ಕಾರು ಚಾಲಕ ಪರಾರಿಯಾಗಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಶಹಾಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಕುರಿತು ಭೀಮರಾಯನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story