ಯಾದಗಿರಿ | ಕೊಳವೆ ಬಾವಿಯ ಪೈಪ್ ಮೇಲೆತ್ತಲು ಮಕ್ಕಳ ಬಳಕೆ ಪ್ರಕರಣ: ಶಿಕ್ಷಣ ಇಲಾಖೆ ವಿರುದ್ಧ ಪೋಷಕರ ಆಕ್ರೋಶ

ಕೆಂಭಾವಿ : ಖಾಸಗಿ ಶಾಲೆಯಲ್ಲಿನ ಕೊಳವೆ ಬಾವಿಯ ಪೈಪ್ ಮೇಲೆತ್ತಲು ಶಾಲಾ ಮಕ್ಕಳನ್ನು ಬಳಸಿಕೊಂಡ ಘಟನೆ ನಡೆದು ಐದು ದಿನಗಳು ಕಳೆದರೂ ಶಾಲೆಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಿಕ್ಷಣ ಇಲಾಖೆಯ ವಿರುದ್ಧ ಪೋಷಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಸುರಪುರ-ಹುನಗುಂದ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜ್ಞಾನದೀಪ ಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ಕುರಿತ ವೀಡಿಯೊ ಕೂಡ ವೈರಲ್ ಆಗಿತ್ತು.
ಶಾಲೆಯ ಕಂಪೌಂಡ್ ಬಳಿ ಕೆಟ್ಟಿದ್ದ ಕೊಳವೆ ಬಾವಿಯಿಂದ ಸುಮಾರು 300ಕ್ಕೂ ಹೆಚ್ಚು ಆಳವಿರುವ ಪೈಪ್ ಮೇಲೆತ್ತಲು ಶಾಲಾ ಮುಖ್ಯಸ್ಥರು ಮತ್ತು ಸಿಬ್ಬಂದಿಗಳು ಮಕ್ಕಳನ್ನು ಬಳಸಿಕೊಂಡ ಬಗ್ಗೆ ಮಾಹಿತಿ ತಿಳಿದು ಮಕ್ಕಳ ಹಿತರಕ್ಷಣಾ ಸಮಿತಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಅಧಿಕಾರಿಗಳ ಭೇಟಿ ನೀಡಿ ಪರಿಶೀಲಿಸಿದರೂ, ಶಾಲೆಯ ವಿರುದ್ಧ ಇಲ್ಲಿಯವರೆಗೂ ಕ್ರಮ ಕೈಗೊಳ್ಳದ ಬಗ್ಗೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಮಕ್ಕಳ ಹಕ್ಕುಗಳ ಆಯೋಗ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರಿಗೆ ದೂರು ನೀಡುವಂತೆ ಡಿಡಿಪಿಐ ಅವರಿಗೆ ಸೂಚನೆ ನೀಡಿದ್ದರು. ಆದರೆ ಅಧಿಕಾರಿಗಳು ಘಟನೆಯನ್ನು ಲಘುವಾಗಿ ಪರಿಗಣಿಸಿದ್ದಾರೆ. ಕೂಡಲೇ ಈ ಬಗ್ಗೆ ಶಿಕ್ಷಣ ಇಲಾಖೆ ಕ್ರಮವನ್ನು ಕೈಗೊಂಡು ಮುಂದೆ ಈ ರೀತಿಯ ಘಟನೆ ಮುರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.
ಈ ಕುರಿತು ಯಾದಗಿರಿ ಡಿಡಿಪಿಐ ಚನ್ನಬಸಪ್ಪ ಮುಧೋಳ ಪ್ರತಿಕ್ರಿಯಿಸಿ, ಘಟನೆ ನಡೆದ ದಿನವೇ ಬಿಇಒ ಅವರಿಗೆ ಮೊಬೈಲ್ ಸಂದೇಶದ ಮೂಲಕ ಪ್ರಕರಣ ದಾಖಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಮಕ್ಕಳ ಹಕ್ಕುಗಳ ಆಯೋಗವೂ ಸೂಚನೆ ನೀಡಿದೆ. ಈ ಬಗ್ಗೆ ಬಿಇಒ ಜೊತೆ ಮಾತನಾಡಿ ಪ್ರಕರಣ ದಾಖಲಿಸುವಂತೆ ಮತ್ತೆ ಹೇಳುತ್ತೇನೆ ಎಂದು ಹೇಳಿದರು.
ಕರವೇ ಮುಖಂಡ ಶೀಶೈಲ್ ಕಾಚಾಪೂರ ಈ ಕುರಿತು ಪ್ರತಿಕ್ರಿಯಿಸಿ, ಮಕ್ಕಳ ಜೀವದ ಜೊತೆ ಆಟವಾಡಿದ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳದ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಈ ಘಟನೆ ಇಡೀ ರಾಜ್ಯದ ಗಮನ ಸೆಳೆದಿದ್ದರೂ ಇಲ್ಲಿಯವರೆಗೂ ಶಾಲೆಯ ಬಗ್ಗೆ ಕನಿಕರ ತೋರುತ್ತಿರುವ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಖಂಡನೀಯ ಎಂದು ಹೇಳಿದರು.







