ಯಾದಗಿರಿ | ಸಾಮರಸ್ಯ ದಿಂದ ಹೋಳಿ ಹಬ್ಬ ಆಚರಣೆ ಮಾಡಿ : ಡಿವೈಎಸ್ಪಿ ಜಾವಿದ್

ಸುರಪುರ : ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಪರಸ್ಪರ ಸಾಮರಸ್ಯದಿಂದ ಮುಂಬರುವ 14 ರಂದು ಹೋಳಿ ಹಬ್ಬವನ್ನು ಆಚರಣೆ ಮಾಡುವಂತೆ ಡಿವೈಎಸ್ಪಿ ಜಾವೀದ್ ಇನಾಂದಾರ್ ತಿಳಿಸಿದರು.
ನಗರದ ಪೊಲೀಸ್ ಠಾಣೆ ಆವರಣದಲ್ಲಿ ಹಮ್ಮಿಕೊಂಡಿದ್ದ ಹೋಳಿ ಹಬ್ಬ ಹಾಗೂ ರಂಜಾನ್ ಅಂಗವಾಗಿ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೋಳಿ ಹಬ್ಬವೂ ಕೂಡ ಸ್ವಾತಂತ್ರ್ಯ ಸಂದರ್ಭದಲ್ಲಿ ಮಹತ್ವವನ್ನು ಪಡೆದುಕೊಂಡು ಪರಸ್ಪರ ಎಲ್ಲರಲ್ಲಿ ಸಾಮರಸ್ಯವನ್ನು ಮೂಡಿಸಿದೆ. ಬಣ್ಣಕ್ಕೆ ಯಾವುದೇ ಜಾತಿ ಧರ್ಮದ ಹಂಗಿಲ್ಲ. ಎಲ್ಲರೂ ಕೂಡ ಪ್ರೀತಿ ಸಹೋದರತೆಯಿಂದ ಬಣ್ಣವನ್ನ ಆಡಬಹುದು, ಆದರೆ ಇಷ್ಟವಿಲ್ಲದವರಿಗೆ ಬಲವಂತದಿಂದ ಬಣ್ಣ ಹಾಕುವುದು ಬೇಡ, ಮುಸ್ಲಿಂ ಬಾಂಧವರು ರಂಝಾನ್ ಅಂಗವಾಗಿ ರೋಜಾ ಸಂದರ್ಭದಲ್ಲಿ ಇಷ್ಟ ಇಲ್ಲದವರಿಗೆ ಬಣ್ಣ ಹಾಕುವಂಥದ್ದು ಮಾಡಬಾರದು, ಮುಸ್ಲಿಂ ಸಮುದಾಯದ ವ್ಯಕ್ತಿಗಳು ಬಣ್ಣ ಆಡುವ ಸಂದರ್ಭದಲ್ಲಿ ಬಣ್ಣ ಹಾಡುವುದು ಇಷ್ಟವಿದ್ದರೆ ಹೋಗಿ ಸೇರಬಾರದು, ಪರಸ್ಪರ ಸೌಹಾರ್ದತೆಯನ್ನು ಮೆರೆದು ಹೋಳಿ ಹಬ್ಬವನ್ನು ಆಚರಣೆ ಮಾಡುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಪಿಎಸ್ಐ ಶಿವರಾಜ ಪಾಟೀಲ, ಕೃಷ್ಣ ಸುಬೇದಾರ್ ಹಾಗೂ ಮುಖಂಡರುಗಳಾದ ವೆಂಕೋಬ ದೊರೆ, ರಾಮು ನಾಯಕ ಅರಳಹಳ್ಳಿ, ಆನಂದ ಲಕ್ಷ್ಮಿಪುರ ಸೇರಿದಂತೆ ಅನೇಕರು ಮಾತನಾಡಿದರು.
ಸಂದೀಪ್ ಜೋಷಿ ಸೇರಿ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಅನೇಕ ಮುಖಂಡರು ಹಾಗೂ ಪೊಲೀಸ್ ಪೇದೆ ದಯಾನಂದ ಜಮಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.