ಯಾದಗಿರಿ | ಮಕ್ಕಳಿಗೆ ಅಪರಾಧಗಳ ಕುರಿತು ಜಾಗೃತಿ ಕಾರ್ಯಕ್ರಮ

ಸುರಪುರ : ನಗರದ ಖುರೇಶಿ ಮೊಹಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೀಟ್ ಪೊಲೀಸರಾದ ಗುರಮ್ಮ ಸತ್ಯಂಪೇಟೆ ಶಾಲೆಗೆ ಭೇಟಿ ನೀಡಿ, ಮಕ್ಕಳಿಗೆ ಅಪರಾಧಗಳ ಬಗ್ಗೆ ಹಾಗೂ ಕಾನೂನು ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯಾರಾದರೂ ಕಿಡಿಗೇಡಿಗಳು ನಿಮಗೆ ತೊಂದರೆ ಕೊಟ್ಟರೆ ನಮ್ಮ ಎಸ್ ಪಿ ಸಾಹೇಬರ ಆದೇಶದ ಮೇರೆಗೆ ನಮ್ಮ ಗಿರಿನಾಡು ಪಡೆ ನಿಮಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಯಾರೇ ಪುಂಡ ಪೋಕರಿಗಳು ನಿಮಗೆ ತೊಂದರೆ ಕೊಟ್ಟರೆ ನಮ್ಮ ಗಮನಕ್ಕೆ ತನ್ನಿ ಎಂದು ತಿಳಿಸಿದರು.
ಬಾಲ್ಯ ವಿವಾಹ ಕಾನೂನಿನ ಪ್ರಕಾರ ಅಪರಾಧವಾಗಿದೆ. ಅಂತ ಘಟನೆ ನಡೆದರೆ ನಮ್ಮ ಗಮನಕ್ಕೆ ತನ್ನಿ, ಯಾರಾದರೂ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದರೆ ಅಂತಹವರ ಬಗ್ಗೆ ಮಾಹಿತಿ ನೀಡಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ತಡೆ ಕಾಯಿದೆ 2012 ಕುರಿತು ತಿಳಿಸಿದರು.
ಪೊಲೀಸ್ ಇಲಾಖೆ ಇರುವುದು ನಿಮ್ಮ ರಕ್ಷಣೆಗಾಗಿ ಯಾವುದೇ ತುರ್ತು ಸಂದರ್ಭದಲ್ಲಿ 112ಗೆ ಕರೆ ಮಾಡಿ ಸದಾ ನಿಮ್ಮ ಸೇವೆಯಲ್ಲಿ ನಾವು ಎಂದು ತಿಳಿಸಿದರು.
ಶಾಲೆಯ ಪ್ರಧಾನ ಗುರುಗಳಾದ ಸಾಮುವೆಲ್ ಅವರು ಮಾತನಾಡಿ, ಶಾಲಾ ಮಕ್ಕಳು ಒಳ್ಳೆಯ ರೀತಿಯಿಂದ ಮೌಲ್ಯಯುತ ಶಿಕ್ಷಣ ಪಡೆಯಬೇಕು. ಶಾಲೆಗೂ ಮತ್ತು ಪೋಷಕರಿಗು ಹೆಸರು ತರಬೇಕು, ಕಾನೂನಿನಲ್ಲಿರುವ ಅಪರಾಧಗಳು ಹಾಗೂ ಶಿಕ್ಷೆಗಳ ಮಾಹಿತಿ ತಿಳಿದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಉರ್ದು ಶಾಲೆಯ ಪ್ರ ಗು ಅಬ್ದುಲ್ ರೆಹಮಾನ್, ಶಿಕ್ಷಕರುಗಳಾದ ಮಾಳಪ್ಪ ಹುಲಕೇರಿ, ಮಂಜುಳಾ, ಅಂಬಿಕಾ, ಶಾಲಾ ಮಕ್ಕಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.