ಯಾದಗಿರಿ | ರೌಡಿ ಶೀಟರ್‌ಗಳ ಜೊತೆ ಹುಟ್ಟುಹಬ್ಬ ಆಚರಣೆ ಆರೋಪ : ಸಿಪಿಐ ಉಮೇಶ್ ವಿರುದ್ಧ ಕ್ರಮಕ್ಕೆ ದಲಿತ ಸಂಘಟನೆಗಳಿಂದ ಒತ್ತಾಯ

ಯಾದಗಿರಿ: ಸುರುಪುರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ(ಸಿಪಿಐ) ಎಂ. ಉಮೇಶ್ ಅವರು ಪೊಲೀಸ್ ಸಮವಸ್ತ್ರದಲ್ಲಿಯೇ ಸುರಪುರದ ಗಾಂಧಿ ವೃತ್ತದಲ್ಲಿ ರೌಡಿ ಶೀಟರ್‌ಗಳಾದ ಮಲ್ಲು ಕಬಡಿಗೇರ ಹಾಗೂ ವೆಂಕಟೇಶ್ ಗುಡ್ಡಕಾಯ ಅವರೊಂದಿಗೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಕೇಕ್ ಕತ್ತರಿಸಿ ಭಾಗವಹಿಸಿರುವ ಆರೋಪ ಕೇಳಿ ಬಂದಿದೆ.
ಈ ಕುರಿತ ಪೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ತಂದಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ), ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ದಲಿತ ಮಹಿಳಾ ಒಕ್ಕೂಟ (ಕ್ರಾಂತಿಕಾರಿ) ರಾಜ್ಯ ಸಮಿತಿ ಒಟ್ಟಾಗಿ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದೆ.
ದಲಿತ ಸಂಘಟನೆಗಳು ಈಶಾನ್ಯ ವಲಯದ ಪೊಲೀಸ್ ಉಪ ಮಹಾನಿರ್ದೇಶಕರು ಹಾಗೂ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಸಿಪಿಐ ಎಂ. ಉಮೇಶ್ ಅವರನ್ನು ತಕ್ಷಣ ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಸಿಪಿಐ ಉಮೇಶ್ ಅವರ ನೇತೃತ್ವದಲ್ಲಿ ಸುರುಪುರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಅಂಬೇಡ್ಕರ್ ಉದ್ಯಾನವನಕ್ಕೆ ಸಂಬಂಧಿಸಿದ ವಿವಾದದಲ್ಲಿ ದಲಿತ ಹಾಗೂ ವಾಲ್ಮೀಕಿ ಸಮುದಾಯಗಳ ಮಧ್ಯೆ ವೈಷಮ್ಯ ಉಂಟಾಗಲು ಕಾರಣರಾಗಿದ್ದಾರೆಂದು ಮನವಿಯಲ್ಲಿ ಹೇಳಲಾಗಿದೆ.
ಒಂದು ವೇಳೆ ಸಿಪಿಐ ಉಮೇಶ್ ಅವರನ್ನು ಅಮಾನತ್ತುಗೊಳಿಸದಿದ್ದರೆ ನವೆಂಬರ್ 26ರಂದು ಎಸ್‌ಪಿ ಕಚೇರಿ ಮುಂದೆ ಚಿತ್ತಾಪೂರ ಎನ್‌ಹೆಚ್ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.







