ಯಾದಗಿರಿ | ಅಂಬೇಡ್ಕರ್ ವೃತ್ತದ ಸುತ್ತಮುತ್ತ ಅಭಿವೃದ್ಧಿಗೆ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಯಾದಗಿರಿ : ಸುರಪುರ ನಗರದ ಹೃದಯ ಭಾಗದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಸುತ್ತಮುತ್ತ ಅಭಿವೃದ್ಧಿ ಪಡಿಸಲು ದಲಿತ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರವಾದ) ಜಿಲ್ಲಾ ಸಮಿತಿಯಿಂದ ಸಲ್ಲಿಸಿದ ಮನವಿಯಲ್ಲಿ, ಅಂಬೇಡ್ಕರ್‌ರವರ ಹೆಸರಲ್ಲಿ ಗ್ರಂಥಾಲಯ, ಉದ್ಯಾನವನ ಹಾಗೂ ಸಾಂಸ್ಕೃತಿಕ ಭವನ ನಿರ್ಮಿಸಲು ಅಗತ್ಯವಿರುವ 2 ಎಕರೆ 26 ಗುಂಟೆ ಭೂಮಿಯನ್ನು ಸರ್ಕಾರವು ಮಂಜೂರು ಮಾಡಬೇಕೆಂದು ಒತ್ತಾಯಿಸಲಾಯಿತು.
1983-84ರಲ್ಲಿ ದಲಿತ ಮುಖಂಡರು ಹಾಗೂ ಸ್ಥಳೀಯ ನಾಗರಿಕರು ಸೇರಿ ಈ ಸರ್ಕಾರಿ ಜಾಗದಲ್ಲಿ ಅಂಬೇಡ್ಕರ್ ವೃತ್ತ ನಿರ್ಮಿಸಿ, 2012-13ರಲ್ಲಿ ಪುತ್ಥಳಿಯನ್ನು ಪ್ರತಿಷ್ಠಾಪಿಸಿದ್ದರು. 2017ರಲ್ಲಿ ಈ ಪುತ್ಥಳಿಯನ್ನು ಡಾ. ಮಲ್ಲಿಕಾರ್ಜುನ್ ಖರ್ಗೆ ಹಾಗೂ ಆಗಿನ ಶಾಸಕ ಡಾ. ರಾಜಾ ವೆಂಕಟಪ್ಪ ನಾಯಕರ ಸಮ್ಮುಖದಲ್ಲಿ ನಗರಸಭೆ ಸುರಪುರ ವತಿಯಿಂದ ಲೋಕಾರ್ಪಣೆ ಮಾಡಲಾಗಿತ್ತು. ಆ ಸಮಯದಿಂದಲೇ ಪ್ರತಿವರ್ಷ ಅಂಬೇಡ್ಕರ್ ಜಯಂತಿ ಹಾಗೂ ಪರಿನಿಬ್ಬಾಣ ದಿನ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿವೆ. ಆದರೆ ಶಾಶ್ವತ ಕಟ್ಟಡಗಳಿಲ್ಲದೆ ಕಾರ್ಯಕ್ರಮಗಳನ್ನು ನಡೆಸುವುದು ಕಷ್ಟವಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಅಂಬೇಡ್ಕರ್ ವೃತ್ತವನ್ನು ಅಭಿವೃದ್ಧಿಪಡಿಸಿ, ದಲಿತ ಸಮಾಜದ ಹೋರಾಟಗಾರರಿಗೆ ನ್ಯಾಯ ಒದಗಿಸಬೇಕು ಎಂದು ಸಂಘಟನೆ ಮನವಿ ಮಾಡಿದೆ. ಈ ಸಂದರ್ಭದಲ್ಲಿ ರಾಮಣ್ಣ ಕಲ್ಲದೇವನಹಳ್ಳಿ, ನಾಗಣ್ಣ ಬಡಿಗೇರ, ಮಾಳಪ್ಪ ಕೀರದಹಳ್ಳಿ, ಮರಳುಸಿದ್ದಪ್ಪ ನಾಯ್ಕಲ್, ರಾಮಣ್ಣ ಸಾದ್ಯಾಪೂರ, ಸೇರಿದಂತೆ ಇತರರು ಉಪಸ್ಥಿತರಿದ್ದರು.





