ಯಾದಗಿರಿ| ಹಳೆ ಬಸ್‌ಗಳ ಗುಜರಿ ಟೆಂಡರ್ ಪಡೆದವರಿಂದ ಅಪಾಯಕಾರಿ ನಿರ್ವಹಣೆ, ವಿಷಾನಿಲ ಭೀತಿ: ಕ್ರಮ ಕೈಗೊಳ್ಳುವಂತೆ ಕರವೇ ಆಗ್ರಹ

ಯಾದಗಿರಿ: ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆ ಹಳೆ ಬಸ್‌ಗಳನ್ನು ಟೆಂಡರ್‌ನಲ್ಲಿ ಪಡೆದ ಏಜೆನ್ಸಿಯವರು ನಿಯಮಾವಳಿಗಳನ್ನು ಉಲ್ಲಂಘಿಸಿ ಅಪಾಯಕಾರಿ ರೀತಿಯಲ್ಲಿ ಗುಜರಿ ನಿರ್ವಹಣೆ ಮಾಡುತ್ತಾ ಪರಿಸರಕ್ಕೆ ಹಾನಿ ಮಾಡುತ್ತಿರುವುದಲ್ಲದೆ ಅಪಾಯಕ್ಕೆ ದಾರಿ ಮಾಡಿಕೊಡುತ್ತಿದ್ದು, ಎಫ್ ಐಆರ್ ದಾಖಲಾಗಿದ್ದರೂ ಕ್ರಮ ಕೈಗೊಳ್ಳದೆ ಇರುವುದು ಖಂಡನೀಯವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಟಿ.ಎನ್. ಭೀಮುನಾಯಕ್, ಗುಜರಿಗೆ ಬಿದ್ದ ನೂರಾರು ಹಳೆಯ ಬಸ್‌ಗಳು ಟೆಂಡರ್ ಮೂಲಕ ಪಡೆದುಕೊಂಡ ಏಜೆನ್ಸಿಗಳಾದ ಉತ್ತರ ಪ್ರದೇಶದ ಸೆವನ್ ಸ್ಟಾರ್, ಹೈದರಾಬಾದ್ ಆಟೋ ಟೆಕ್ಸ್ ಸ್ಥಾಪರ್ಸ ಏಜೆನ್ಸಿ ಹಾಗೂ ಮಧ್ಯಪ್ರದೇಶದ ನಿಯಮಾವಳಿಗಳು ಷರತ್ತುಗಳು ಉಲ್ಲಂಘಿಸಿ ತಾಲೂಕಿನ ಮುಂಡರಗಿ ಗ್ರಾಮ ಸೀಮಾಂತರ ಗಂಜ್ ಪ್ರದೇಶದ ಸಮೀಪದ ಕೈಗಾರಿಕೆ ಪ್ರದೇಶದ ಪಕ್ಕದ ಖಾಸಗಿ ಜಮೀನಿನಲ್ಲಿ ಆಕ್ರಮವಾಗಿ ಗುಜರಿ ನಿರ್ವಹಣೆ ಮಾಡುತ್ತಿರುವುದರಿಂದ ಸುತ್ತಮುತ್ತಲ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಇದಲ್ಲದೇ ಈ ಪ್ರದೇಶದ ಸುತ್ತಮುತ್ತ ಶಿಕ್ಷಣ ಸಂಸ್ಥೆಗಳಿದ್ದು ನೂರಾರು ವಿದ್ಯಾರ್ಥಿಗಳು ಓಡಾಡುವ ಅತ್ಯಂತ ಸೂಕ್ಷ್ಮ ಪ್ರದೇಶ ಇದಾಗಿದೆ. ಅಪಾಯಕಾರಿ ಡಿಸ್ಟೆಂಟ್ಲಿಂಗ್ ಬಗ್ಗೆ ಈಗಾಗಲೇ ಪರಿಸರ ಮಂಡಳಿಯ ಸಹಾಯಕ ಪರಿಸರ ಅಧಿಕಾರಿ ಹಣಮಂತಪ್ಪ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಜಿಲ್ಲಾಧಿಕಾರಿಗಳು, ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಮೇಲಾಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಕ್ರಮ ಕೈಗೊಳ್ಳದೇ ಇರುವುದರಿಂದ ಅಪಾಯದ ಹೆಚ್ಚಳದ ಭೀತಿಯಲ್ಲಿ ಮುಂಡರಗಿ ಭಾಗದ ಹಾಗೂ ನಗರದ ಗಂಜ್ ಪ್ರದೇಶದ ನಿವಾಸಿಗಳು ಬದುಕುವಂತಾಗಿದೆ. ಬಸ್ ಬಿಡಿಭಾಗಗಳನ್ನು ಹಂತ ಹಂತವಾಗಿ ಸಿಲಿಂಡರ್ ಬಳಸಿ ತೆಗೆಯುತ್ತಿದ್ದು ಮತ್ತು ಸದರಿ ವಾಹನಗಳಲ್ಲಿನ ಅಳಿದುಳಿದ ಆಯಿಲ್ ಮತ್ತು ಇನ್ನಿತರ ಪೇಟ್ರೋಕೆಮಿಕಲುಗಳು ಅಸುರಕ್ಷಿತವಾಗಿ ಮಣ್ಣಲ್ಲಿ ಸೇರಿಕೊಳ್ಳುವ ಭೀತಿಯಿದೆ ಎಂದು ಹೇಳಿದ್ದಾರೆ.
ಈ ಕುರಿತು ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳದೆ ಇದ್ದಲ್ಲಿ ಕರವೇ ಕಾರ್ಯಕರ್ತರು ಯಾದಗಿರಿ-ಹೈದರಾಬಾದ್ ಹೆದ್ದಾರಿ ತಡೆದು ಪ್ರತಿಭಟನೆ ಮಾಡುವುದಾಗಿ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ಸಂತೋಷ್ ನಿರ್ಮಲಕರ್, ವಿಶ್ವರಾಜ ಪಾಟೀಲ್, ಕಾಶಿನಾಥ ನಾಯಕ್, ಬಸ್ಸು ಜಗನ್ನಾಥ್ ಎಚ್ಚರಿಕೆ ನೀಡಿದ್ದಾರೆ.







