ಯಾದಗಿರಿ | 9 ಬೇಡಿಕೆಗಳಿಗೆ ಆಗ್ರಹಿಸಿ ಆ.12 ರಿಂದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅಹೋರಾತ್ರಿ ಧರಣಿ : ಕೆ.ಸೋಮಶೇಖರ್

ಯಾದಗಿರಿ: ಆಶಾ ಕಾರ್ಯಕರ್ತೆಯರ ಒಂಬತ್ತು ಬೇಡಿಕೆಗಳಿಗೆ ಆಗ್ರಹಿಸಿ ಎಐಯುಟಿಯುಸಿ ಬೆಂಬಲಿತ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಆ.12 ರಿಂದ 14 ರವರೆಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳ ಎದುರು ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜನವರಿ ತಿಂಗಳಲ್ಲಿ ರಾಜ್ಯದ ಸುಮಾರು 42 ಸಾವಿರ ಆಶಾ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ಸತತ ನಾಲ್ಕು ದಿನಗಳ ಕಾಲ ನಡೆಸಿದ ಹೋರಾಟಕ್ಕೆ ಸ್ಪಂದಿಸಿ ಸಿಎಂ ಸಿದ್ದರಾಮಯ್ಯ ಅವರು, 10 ಸಾವಿರ ರೂ. ಸಂಬಳ ಹೆಚ್ಚಿಗೆ ಸೇರಿದಂತೆಯೇ ವಿವಿಧ ಬೇಡಿಕೆಗಳು ಈಡೆರಿಸುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಒಂದೇ ಒಂದು ಬೇಡಿಕೆ ಈಡೇರಿಸಿದ ಕಾರಣ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಅವರು ಹೇಳಿದರು.
ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ 1ಸಾವಿರ ರೂ. ಪ್ರೋತ್ಸಾಹಧನ ಹೆಚ್ಚಿಸಿದಂತೆಯೇ ಆಶಾ ಕಾರ್ಯಕರ್ತೆಯರಿಗೂ ಸಹ ಹೆಚ್ಚು ಮಾಡಬೇಕು, ಇವರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆಯಬಾರದು, 2025 ರಲ್ಲಿ ಕೇಂದ್ರ ಸರ್ಕಾರ ಹೆಚ್ಚಿಸಿದ ಆಶಾ ಪ್ರೋತ್ಸಾಹ ಧನವನ್ನು ರಾಜ್ಯದಲ್ಲೂ ಜಾರಿಗೊಳಿಸಬೇಕು ಮತ್ತು ನಗರ ಆಶಾ ಕಾರ್ಯಕರ್ತೆಯರಿಗೆ 2 ಸಾವಿರ ರೂ.ಗೌರವಧನ ಹೆಚ್ಚಿಸಬೇಕೆಂದು ಕೆ.ಸೋಮಶೇಖರ ಒತ್ತಾಯಿಸಿದರು.
ಈ ವೇಳೆ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಬಿ.ಎನ್.ರಾಮಲಿಂಗಪ್ಪ ಇದ್ದರು.
ಡಿಸಿ ಕಚೇರಿ ಮುಂದೇ ಧರಣಿ :
ಯಾದಗಿರಿ ಜಿಲ್ಲೆಯಲ್ಲಿ ಸುಮಾರು ಒಂದು ಸಾವಿರ ಆಶಾ ಕಾರ್ಯಕರ್ತೆಯರು, 60 ಜನ ಆಶಾ ಸುಗಮಕಾರರು ಮತ್ತು ನಾಲ್ಕು ಜನ ಮೇಲ್ವಿಚಾರಕರು ಇದ್ದು, ಅವರೆಲ್ಲ ಆ.12 ರಿಂದ 14ರವರೆಗೂ ಡಿಸಿ ಕಚೇರಿ ಮುಂದೆ ನಡೆಯಲಿರುವ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಲಿದ್ದಾರೆಂದು ಸಂಘದ ಜಿಲ್ಲಾಧ್ಯಕ್ಷೆ ಡಿ.ಉಮಾದೇವಿ ಹೇಳಿದರು.







