ಯಾದಗಿರಿ | ಆ.9ರಂದು ಜಿಲ್ಲಾ ಮಟ್ಟದ ಸಂವಿಧಾನ ಜನಜಾಗೃತಿ ಸಮಾವೇಶ

ಯಾದಗಿರಿ: ಆ.9ರಂದು ಯಾದಗಿರಿ ಜಿಲ್ಲಾ ಮಟ್ಟದ ಸಂವಿಧಾನ ಜನಜಾಗೃತಿ ಸಮಾವೇಶವನ್ನು ಶಹಾಪುರ ತಾಲ್ಲೂಕಿನ ಆರಬೋಳ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ನೀಲಕಂಠ ಬಡಿಗೇರ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಪ್ರಸ್ತಾವನೆಯಲ್ಲಿ ಧರ್ಮನಿರಾಪೇಕ್ಷತೆ, ಸಮಾಜವಾದ ಪದಗಳನ್ನು ಉಳಿಸಲು ಹಾಗೂ ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ನೂತನ ವಕ್ಫ್ (ತಿದ್ದುಪಡಿ) ಕಾಯ್ದೆ 2025ನ್ನು ವಿರೋಧಿಸಿ, ಬೌದ್ಧರ ಸಂವಿಧಾನಿಕ ಹಕ್ಕುಗಳನ್ನು ನಿರಾಕರಿಸುವ ಬುದ್ಧಗಯಾ ಟೆಂಪಲ್ ಬಿ ಟಿ ಆಕ್ಟ್ 1949 ರದ್ದತಿಗೆ ಒತ್ತಾಯಿಸಿ ಈ ಒಂದು ಜನಜಾಗೃತಿ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹಾದೇವಪ್ಪ ಮತ್ತು ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿವರು. ಜಿಲ್ಲಾ ಉಸ್ತುವಾರಿ ಶರಣಬಸಪ್ಪಗೌಡ ದರ್ಶನಾಪೂರ ಹಾಗೂ ಸಚಿವ ಆರ್.ಬಿ.ತಿಮ್ಯಾಪುರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು.
ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಬಾಬುರಾವ್ ಚಿಂಚನಸೂರ್ ಸಂವಿಧಾನ ಪೂರ್ವ ಪೀಠಿಕೆ ಅನಾವರಣ ಮಾಡುವರು, ವಿಶೇಷ ಉಪನ್ಯಾಸಕರಾಗಿ ಮಾಜಿ ಸಭಾಪತಿ ಕೆ.ಆರ್. ರಮೇಶಕುಮಾರ ಪ್ರಗತಿಪರ ಚಿಂತಕ ಇಲ್ಯಾಸ್ ಮುಹಮ್ಮದ್ ತುಂಬೆ ಬೌದ್ಧ ಸಾಹಿತಿ ದೇವೇಂದ್ರ ಹೆಗಡೆ ಸಮಾವೇಶದಲ್ಲಿ ಭಾಗವಹಿಸುವರು. ಮುಖ್ಯ ಅತಿಥಿಯಾಗಿ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಇರುವರು ಎಂದು ತಿಳಿಸಿದರು.
ಈ ಸಮಾವೇಶಕ್ಕೆ ಜಿಲ್ಲೆಯ ಎಲ್ಲ ದಲಿತ ಸಂಘಟನೆ ಅಧ್ಯಕ್ಷರು, ದಲಿತಪರ ಚಿಂತಕರು, ಅಂಬೇಡ್ಕರ್ ಅನುಯಾಯಿಗಳು ಯುವಕರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗಿರೇಪ್ಪಗೌಡ ಬಾಣತಿಹಾಳ, ಮರೆಪ್ಪ ಚಟ್ಟೇರಕರ್, ಶಾಂತಪ್ಪ ಗುತ್ತೆದಾರ, ರುದ್ರಪ್ಪ, ಹುಲಿಮನಿ, ಮಹಾದೇವಪ್ಪ ಸಾಲಿಮನಿ, ಸೈಯದ್ ಖಾದ್ರಿ, ಮಾನಸಿಂಗ್ ಚವ್ಹಾಣ,ಸೈಯದ್ ಹುಸೇನ್, ವೆಂಕಟೇಶ, ಶಂಕರ್ ಸಿಂಗೆ, ಬಾಬರಾವ್ ಬುತಾಳೆ, ಮಾಲ್ಲಪ್ಪ ಬಿರನೂರ, ಸೈದಪ್ಪ ಕೂಯಿಲೂರ್, ಗೋಪಾಲ ತೆಳಗೇರಿ, ಸೇರಿದಂತೆ ಅನೇಕರು ಇದ್ದರು.







