Yadgir | ಮೇ 18ರಂದು ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ : ಮಲ್ಲಪ್ಪ ಸಂಕೀನ್

ಯಾದಗಿರಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಸಾಧಕ ಪತ್ರಕರ್ತರ ಸನ್ಮಾನ ಹಾಗೂ ಸಂಘದ ಸರ್ವ ಸದಸ್ಯರ ಸಭೆ ಮೇ 18ರಂದು ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಅವರು ತಿಳಿಸಿರುವಂತೆ, ಅಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆಯುವ ಕಾರ್ಯಕ್ರಮವನ್ನು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಉದ್ಘಾಟಿಸಲಿದ್ದಾರೆ. ಶಾಸಕ ಶರಣಗೌಡ ಕಂದಕೂರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಶ್ರೇಣಿಕುಮಾರ ಧೋಕಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹಾಗೂ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಧರ್ ಸಾಹುಕಾರ ಭಾಗವಹಿಸಲಿದ್ದಾರೆ.
ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅಧ್ಯಕ್ಷತೆ ವಹಿಸಲಿದ್ದು, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಲಿಂಗೇರಿ ಹಾಗೂ ರಾಜ್ಯ ಪರಿಷತ್ ಸದಸ್ಯ ಸಾಗರ್ ದೇಸಾಯಿ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಪತ್ರಕರ್ತರ ಮಕ್ಕಳಾದ ಯಶೋಧಾ ಚಂದ್ರು ನಾರಾಯಣಪುರ, ರಿಷಿಕಾ ರಾಘವೇಂದ್ರ ಸೈದಾಪುರ, ವರುಣ ಮಹೇಶ ಕಲಾಲ, ಮುತ್ತುರಾಜ್ ರವಿರಾಜ್ ಕಂದಳ್ಳಿ, ಭಾರ್ಗವ ಭೀಮಸೇನರಾವ ಕುಲಕರ್ಣಿ, ಇಕ್ರಾ ಶಹಜಿಯಾ ಖಾಜಾ ಕಲೀಮುದ್ದೀನ್ ಫರೀದಿ, ಸಾಯಿಸುಜಲ ಮಲ್ಲಿಕಾರ್ಜುನ ಮುದ್ನೂರ, ಸಂಗೀತಾ ಶಿವಣ್ಣ ಚಿನ್ನಾಕಾರ ಬೂದಿಹಾಳ ಹಾಗೂ ಹರ್ಷಿತ್ ರಾಠಿ ಸೇರಿ 9 ವಿದ್ಯಾರ್ಥಿಗಳಿಗೆ ತಲಾ 5,000 ರೂ. ನಗದು ಬಹುಮಾನ ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಬಳಿಕ ಸಂಘದ ಸರ್ವ ಸದಸ್ಯರ ಸಭೆ ನಡೆಯಲಿದ್ದು, 2024-25ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ಸಂಘದ ಎಲ್ಲಾ ಸದಸ್ಯರು ಸಭೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮಲ್ಲಪ್ಪ ಸಂಕೀನ್ ಮನವಿ ಮಾಡಿದ್ದಾರೆ.
ಐವರು ಪತ್ರಕರ್ತರಿಗೆ ಸನ್ಮಾನ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಅಮರೇಶ ಹಿರೇಮಠ, ಟಿ. ನಾಗೇಂದ್ರ, ಸಂಜೀವರಾವ್ ಕುಲಕರ್ಣಿ, ಮಲ್ಲಯ್ಯ ಪೋಲಂಪಲ್ಲಿ ಹಾಗೂ ಬಸವರಾಜ ಕಟ್ಟಿಮನಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.






