ಯಾದಗಿರಿ: 24 ದೂರದಾರಿಗೆ ಜಿಲ್ಲಾ ಪಂಚಾಯತಿಯಿಂದ ವಸೂಲಾತಿ ನೋಟಿಸ್!

ಲವೀಶ್ ಒರಡಿಯಾ, ಜಿಲ್ಲಾ ಪಂಚಾಯತ್ ಸಿಇಒ
ಯಾದಗಿರಿ: ಕಾನೂನು ರಕ್ಷಣೆಯನ್ನು ಅಸ್ತ್ರವಾಗಿ ದುರ್ಬಳಕೆ ಮಾಡುವವರ ವಿರುದ್ಧ ಜಿಲ್ಲಾ ಪಂಚಾಯತ್ ಕಠಿಣ ನಿರ್ಧಾರಕ್ಕೆ ಮುಂದಾಗಿದ್ದು, ಸುಳ್ಳು ಹಾಗೂ ಹಿಂಪಡೆಯಲಾದ ದೂರುಗಳ ಹಿನ್ನೆಲೆ 24 ದೂರುದಾರರಿಗೆ ಒಟ್ಟು ರೂ. 1,57,475 ವಸೂಲಾತಿ ನೋಟಿಸ್ ಜಾರಿ ಮಾಡಲಾಗಿದ್ದು, ಉತ್ತರ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಅವರು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಮತ್ತು ಅದರ ಅಧೀನ ಕಚೇರಿಗಳು ಜನಪರ ಯೋಜನೆಗಳ ಅನುಷ್ಠಾನದಲ್ಲಿ ತೊಡಗಿಸಿಕೊಂಡಿದ್ದು, ಕರ್ತವ್ಯ ಲೋಪ ಕಂಡುಬಂದಲ್ಲಿ ಸಾರ್ವಜನಿಕರು ದೂರು ಸಲ್ಲಿಸಲು ಸಂಪೂರ್ಣ ಅವಕಾಶವಿದೆ. ಪ್ರತಿವರ್ಷ ಸರಾಸರಿ 3 ಸಾವಿರ ದೂರುಗಳು ಸ್ವೀಕರಿಸಲ್ಪಡುತ್ತಿದ್ದು, ಪರಿಶೀಲನೆ ಬಳಿಕ ಸಾಬೀತಾದ ಪ್ರಕರಣಗಳಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ.
ಆದರೆ ಇತ್ತೀಚೆಗೆ ಸಾಕ್ಷ್ಯಾಧಾರವಿಲ್ಲದೆ ದುರುದ್ದೇಶಪೂರಿತ ದೂರುಗಳನ್ನು ಸಲ್ಲಿಸಿ, ತನಿಖೆ ಆರಂಭವಾದ ಬಳಿಕ ‘ತಪ್ಪು ತಿಳುವಳಿಕೆ’ ಅಥವಾ ವೈಯಕ್ತಿಕ ಕಾರಣಗಳನ್ನು ನೀಡುತ್ತ ಹಿಂಪಡೆಯುವ ಪ್ರಕರಣಗಳು ಹೆಚ್ಚಾಗಿವೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, 2021ರ ಸರ್ಕಾರದ ಸುತ್ತೋಲೆ ಅನ್ವಯ ಮೊದಲು ದೂರು ನೀಡಿ ಬಳಿಕ ಹಿಂಪಡೆದವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಇವರಿಗೆ ನೋಟಿಸ್ ನೀಡಿ ಉತ್ತರಿಸಲು ಅವಕಾಶ ಕಲ್ಪಿಸಲಾಗಿದೆ. ಸಮಾಧಾನಕರ ಉತ್ತರ ಸಿಗದಿದ್ದರೆ, ಮುಂದಿನ ದೂರುಗಳನ್ನು ಪರಿಗಣಿಸದಂತೆ ಕಪ್ಪುಪಟ್ಟಿಗೆ ಸೇರಿಸುವ ಎಚ್ಚರಿಕೆ ನೀಡಲಾಗಿದೆ.-
ಕೆಲವು ವ್ಯಕ್ತಿಗಳು ಹಾಗೂ ಕೆಲವು ಸಂಘಟನೆಗಳು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ದೂರುಗಳನ್ನು ನೀಡಿ ಬಳಿಕ ವಾಪಸು ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ರೀತಿಯ ದುರುಪಯೋಗವನ್ನು ತಡೆಯಲು, ಇನ್ನು ಮುಂದೆ ದೂರುಗಳನ್ನು ಸಲ್ಲಿಸುವವರು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಯಾವುದೇ ರೀತಿಯ ಅನಧಿಕೃತ ಅಥವಾ ದುರುಪಯೋಗದ ಕ್ರಮ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ನೈಜ ಸಮಸ್ಯೆಗಳಿರುವ ಜನತೆಗೆ ಜಿಲ್ಲಾ ಪಂಚಾಯತ್ ಸದಾ ಸ್ಪಂದಿಸುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ.
-ಲವೀಶ್ ಒರಡಿಯಾ, ಜಿಲ್ಲಾ ಪಂಚಾಯತ್ ಸಿಇಒ






