ಯಾದಗಿರಿ | ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ : ಮಲ್ಲಪ್ಪ ಸಂಕೀನ್ ಸತತ 2ನೇ ಬಾರಿಗೆ ಜಿಲ್ಲಾಧ್ಯಕ್ಷರಾಗಿ ಆಯ್ಕೆ

ಯಾದಗಿರಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸತತ ಎರಡನೇ ಬಾರಿಗೆ ಜಿಲ್ಲಾಧ್ಯಕ್ಷರಾಗಿ ಮಲ್ಲಪ್ಪ ಸಂಕೀನ್ ಆಯ್ಕೆಯಾಗಿದ್ದಾರೆ.
ಜಿಲ್ಲಾ ಪತ್ರಿಕಾ ಭವನದಲ್ಲಿ ರವಿವಾರ ನಡೆದ ಚುನಾವಣೆಯಲ್ಲಿ ತಮ್ಮ ಎದುರಾಳಿಯಾಗಿದ್ದ ದಿನೇಶ್ ವಿ.ಸಿ. ಅವರನ್ನು 9 ಮತಗಳ ಅಂತರದಿಂದ ಮಲ್ಲಪ್ಪ ಸಂಕೀನ್ ಸೋಲಿಸಿದರು.
ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಬಿರುಸಿನಿಂದ ಮತದಾನ ನಡೆಯಿತು. ಜಿಲ್ಲೆಯಲ್ಲಿ ಒಟ್ಟು 142 ಮತದಾರರ ಪೈಕಿ 137 ಮತದಾರರು ಹಕ್ಕು ಚಲಾಯಿಸಿದರು. ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಮಲ್ಲಪ್ಪ ಸಂಕೀನ್ ಅವರು 73 ಮತಗಳನ್ನು ಪಡೆದರು. ಚುನಾವಣೆಯಲ್ಲಿ ಪರಾಭವಗೊಂಡಿರುವ ದಿನೇಶ್ ವಿ.ಸಿ. 64 ಮತವನ್ನು ಪಡೆದಿದ್ದಾರೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಮಲ್ಲಪ್ಪ ಸಂಕೀನ್, ಜಿಲ್ಲೆಯ ಪತ್ರಕರ್ತ ಮಿತ್ರರರು ನನ್ನ ಮೇಲೆ ಅಪಾರವಾದ ವಿಶ್ವಾಸವಿಟ್ಟುಕೊಂಡು ಮತ್ತೊಮ್ಮೆ ಗೆಲ್ಲಿಸಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.





