ಯಾದಗಿರಿ | ಬಾಲ್ಯ ವಿವಾಹದ ಮೂಲಕ ಅಪ್ರಾಪ್ತ ಹೆಣ್ಣು ಮಕ್ಕಳ ಆತ್ಮಸ್ಥೈರ್ಯ ಕುಗ್ಗಿಸಬೇಡಿ; ನ್ಯಾ.ಬಿ.ಎಸ್.ರೇಖಾ
ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ

ಯಾದಗಿರಿ : ಅಪ್ರಾಪ್ತ ಬಾಲಕಿಯರಿಗೆ ಬಾಲ್ಯ ವಿವಾಹ ಮಾಡುವ ಮೂಲಕ ಅವರ ಮಾನಸಿಕ, ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಸಮಾಜದಲ್ಲಿ ಆಗಬಾರದು ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಬಿ.ಎಸ್.ರೇಖಾ ಅವರು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ʼಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆʼ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರ ಮೇಲೆ ಅನೇಕ ರೀತಿಯಲ್ಲಿ ಶೋಷಣೆ ನಡೆಯುತ್ತಿವೆ. ಜನ್ಮ ಸಮಯದಲ್ಲಿ ಹೆಣ್ಣು ಮಗು ಬೇಡವೆಂಬ ತಾರತಮ್ಯ ಹುಟ್ಟಿದ ನಂತರ ಶಿಕ್ಷಣ ನೀಡಲು ನಿರಾಕರಣೆ, ವಿವಾಹಕ್ಕೆ ಖರ್ಚು ಮಾಡಿದ ಮೇಲೆ ಆಸ್ತಿ ಪಾಲು ನೀಡಲು ನಿರಾಕರಣೆ, ಕೆಲಸದ ಸಂದರ್ಭದಲ್ಲಿ ಶೋಷಣೆ ಹೀಗೆ ಹಲವು ರೀತಿಯಲ್ಲಿ ಶೋಷಣೆಗಳ ಜೊತೆಗೆ ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗು ಮೂಲಕ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸಗಳು ಅವ್ಯಾಹತವಾಗಿ ನಡೆಯುತ್ತಿದ್ದು, ಸಮಾಜದಲ್ಲಿ ಇದು ನಿಲ್ಲಬೇಕು ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಪೋಕ್ಸೊ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿರುವ ಮಹಿಳೆಯರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಮೋಬೈಲ್ ಗೀಳು ಮಕ್ಕಳ ದಾರಿ ತಪ್ಪಿಸುತ್ತಿದೆ. ಮದ್ಯ ವ್ಯಸನ ಮಾಡದಂತೆ ನಿಗಾವಹಿಸಬೇಕು. ಅದರಂತೆ ಹೆಣ್ಣು ಮಕ್ಕಳ ಬೆಳವಣಿಗೆ ಸಂದರ್ಭದಲ್ಲಿ ದೈಹಿಕ ಬದಲಾವಣೆ ಗಮನಿಸಬೇಕು, ಮಕ್ಕಳ ಸಮಸ್ಯೆಗಳ, ಭವಿಷ್ಯದ ಬಗ್ಗೆ ಕಾಳಜಿ ವಹಿಸುವಂತೆ ಅವರು ಸಲಹೆ ನೀಡಿದರು.
ಮಹಿಳೆಯರನ್ನು ಶಕ್ತಿಸ್ವರೂಪಿಯಾಗಿ ನೋಡುವ ಬದಲು ಹೆಣ್ಣು ಗಂಡು ಸಮಾನ ದೃಷ್ಠಿಯಿಂದ ನೋಡುವುದು ಮುಖ್ಯ. ತಾಯಿಯಾಗಿ, ಪತ್ನಿಯಾಗಿ, ಸಹೋದರಿಯಾಗಿ, ಮಗಳಾಗಿ ಕುಟುಂಬ ನಡೆಸುವ ಮಹಿಳೆಯರೇ ಎಲ್ಲವನ್ನೂ ಸಹಿಸಿ ಮುನ್ನುಗ್ಗುವ ಸಾಮರ್ಥ್ಯ ಹೊಂದಿದ್ದಾರೆ. ಮಹಿಳೆಯರು ಹಾಗೂ ಪುರುಷರು ಕೂಡಿ ಕುಟುಂಬದ ರಥ ಎಳೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ನಗರಸಭೆ ಅಧ್ಯಕ್ಷ ಕು.ಲಲಿತಾ ಅನಪುರ ಅವರು ಮಹಿಳೆಯರನ್ನು ಸಮಾಜದಲ್ಲಿ, ಸಮಾನತೆ ಗೌರವದಿಂದ ನೋಡಬೇಕೆಂದರು.
ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮರೆಯಪ್ಪ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಮಾತನಾಡಿ, ಮಹಿಳೆ ಮತ್ತು ಪುರುಷರು ಎಂಬ ಭೇದಭಾವ ತೊಲಗಬೇಕು. ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಹಾಗೂ ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ಅವಕಾಶ ಸಿಗಬೇಕು. ಹೆಣ್ಣು ಮಕ್ಕಳು ಪರಿಪೂರ್ಣ ವಿದ್ಯಾವಂತರಾಗುವವರೆಗೆ ಸಾಧನೆ ಮಾಡಲು ಅಸಾಧ್ಯ. ಕಾರಣ ಹೆಣ್ಣು ಮಗುವಿಗೆ ಕಡ್ಡಾಯವಾಗಿ ಶಿಕ್ಷಣದ ಹಕ್ಕು ದೊರಕಿಸಬೇಕು. ಸಮಾಜದಲ್ಲಿ ಪ್ರತಿ ಹೆಣ್ಣು ಮಗುವಿಗೆ ಗೌರವ ದೊರಕಿಸಬೇಕು. ಮಹಿಳಾ ಹಕ್ಕುಗಳ ರಕ್ಷಣೆ, ಈ ಕುರಿತು ಇರುವ ಕಾಯ್ದೆ, ಮಹಿಳಾ ರಕ್ಷಣೆ, ಮಹಿಳಾ ದೌರ್ಜನ್ಯ ತಡೆ ಕಾಯ್ದೆ, ಪೊಕ್ಸೋ ಕಾಯ್ದೆ ಕುರಿತು ಅರಿವುಗೆ ಮಹಿಳಾ ದಿನಾಚರಣೆ ಹಾಗೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾಧಿಕಾರಿಗಳು, ನಗರಸಭೆ ಅಧ್ಯಕ್ಷರನ್ನು, ಮಹಿಳಾ ಅಧಿಕಾರಿಗಳನ್ನು, ಸಾಧನೆಗೈದ ಮಹಿಳಾ ಕ್ರೀಡಾಪಟುಗಳು, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಗೈದ ವರನ್ನು ಸನ್ಮಾನಿಸಲಾಯಿತು. ಕುಮಾರಿ ಯಾದಗಿರಿ, ಶ್ರೀಮತಿ ಯಾದಗಿರಿ ಸ್ಪರ್ಧೆಗಳನ್ನು ನಡೆಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ವೀರಣಗೌಡ ಅವರು ಸ್ವಾಗತಿಸಿದರು. ಮಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಸಹಾಯಕ ಆಯುಕ್ತರಾದ ಹಂಪಣ್ಣ ಸಜ್ಜನ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳಾದ ರಾಜು ಬಾವಿ ಹಳ್ಳಿ. ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







