ಯಾದಗಿರಿ | ಪರಿಣಾಮಕಾರಿ ಔಷಧಿಗಳ ಮೂಲಕ ಮೂರ್ಛೆ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು : ಲಕ್ಷ್ಮೀ

ಯಾದಗಿರಿ: ಎಪಿಲೆಪ್ಸಿ ಅಥವಾ ಅಪಸ್ಮಾರ ಎಂಬುದು ಮೆದುಳಿನ ದೀರ್ಘಕಾಲದ ಅಸ್ವಸ್ಥತೆಯಾಗಿದ್ದು, ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಪರಿಣಾಮಕಾರಿ ಔಷಧಿಗಳನ್ನು ನೀಡುವುದರಿಂದ ಮೂರ್ಛೆ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು ಎಂದು ಮನೋವೈದ್ಯರಾದ ಲಕ್ಷ್ಮೀ ಅವರು ಹೇಳಿದರು.
ಯಾದಗಿರಿ ನಗರದ ಗಚ್ಚಿ ಬೌಲಿ. ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಅಪಸ್ಮಾರ ದಿನಾಚರಣೆ ಪ್ರಯುಕ್ತ ಯಾದಗಿರಿ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಯಿಮ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೂರ್ಛೆ ರೋಗಕ್ಕೆ ತುತ್ತಾದವರು ನಿಗದಿತ ಅವಧಿಯವರೆಗೆ ಕ್ರಮಬದ್ಧವಾಗಿ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ. ಮೂರ್ಛೆರೋಗವನ್ನು ಆದಷ್ಟು ಬೇಗ ಪತ್ತೆ ಹಚ್ಚಿ ಚಿಕಿತ್ಸೆ ಆರಂಭಿಸುವುದರಿಂದ ಮೆದುಳಿಗೆ ಹೆಚ್ಚಿನ ಹಾನಿಯಾಗದಂತೆ ತಡೆಯಬಹುದು ಎಂದು ತಿಳಿಸಿದರು.
ಸಿದ್ದಾರೂಢ ಅವರು ಮಾತನಾಡಿ, ಅಪಸ್ಮಾರ ರೋಗಿಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ, ಸುಧಾರಿತ ಆರೋಗ್ಯ ಸೇವೆ, ಮಾನಸಿಕ ಆರೋಗ್ಯಕ್ಕೆ ಬೆಂಬಲವನ್ನು ನೀಡುವಲ್ಲಿ ಈ ಆಚರಣೆಯು ನಿರ್ಣಾಯಕ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲದೆ ಈ ದಿನ ಅಪಸ್ಮಾರ ಕಾಯಿಲೆ, ಅದರ ರೋಗನಿರ್ಣಯ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಸಂಯೋಜಕರಾದ ಶ್ರೀಮತಿ ನಾಗರತ್ನ ಮಾತನಾಡಿ, ರೋಗ ಬಂದಾಗ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯವಾಗಿದೆ. ಆದರೆ ಹೆಚ್ಚಿನವರು ಈ ಮೂರ್ಛೆ ರೋಗವನ್ನು ಶಾಪವೆಂದು ನಂಬುತ್ತಾರೆ. ಹೀಗಾಗಿ ಈ ರೋಗದ ಬಗ್ಗೆ ಇರುವ ಜನರ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಲು ಮತ್ತು ಅಪಸ್ಮಾರದ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಅಪಸ್ಮಾರ ಅಥವಾ ಮೂರ್ಛೆ ರೋಗ ಎಂಬುದು ಮೆದುಳಿಗೆ ಸಂಬಂಧಪಟ್ಟ ನರವೈಜ್ಞಾನಿಕ ಕಾಯಿಲೆಯಾಗಿದೆ. ಈ ರೋಗ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಮೇಲ್ವಿಚಾರಕರು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.







