ಯಾದಗಿರಿ | ಯರಗೊಳ ಬೈಪಾಸ್ ಬಳಿ ಭೀಕರ ಅಪಘಾತ: ಇಬ್ಬರು ಮೃತ್ಯು, ಐವರಿಗೆ ಗಾಯ

ಯಾದಗಿರಿ: ಯಾದಗಿರಿ–ರಾಯಚೂರು ಮುಖ್ಯರಸ್ತೆಯ ಯರಗೊಳ ಬೈಪಾಸ್ ಬಳಿ ಕಾರು ಪಲ್ಟಿಯಾಗಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.
ಮೃತರನ್ನು ಸಾಹಿಲ್ ಶರೀಫ್ (25) ಸೈಯದ್ ಯಾಸೀನ್ (23) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನಿಂದ ಕಲಬುರಗಿಯ ಬಂದೇನವಾಜ್ ದರ್ಗಾಕ್ಕೆ ತೆರಳುತ್ತಿದ್ದರು. ಕಾರಿನಲ್ಲಿದ್ದ ಸೈಯದ್ ಆಸೀಫ್, ವಸೀಮ್, ಅಲಿಜಾನ್ ಪಾಷಾ, ಸಮೀರ್ ಹಾಗೂ ಕಾರು ಚಾಲಕ ಅನ್ಸಾರಿ ಗಾಯಗೊಂಡಿದ್ದು, ಅವರನ್ನು ಯಾದಗಿರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
7 ಮಂದಿಯಿದ್ದ ಕಾರು ಯರಗೊಳ ಗ್ರಾಮದ ಬೈಪಾಸ್ ಬಳಿ ತೆರಳುತ್ತಿದ್ದಾಗ ಕಾರಿಗೆ ನಾಯಿ ಅಡ್ಡ ಬಂದಿದೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಕಾರು ಪಲ್ಟಿಯಾಗಿ ರಸ್ತೆ ಬದಿಗೆ ಉರುಳಿ ಬಿದ್ದಿದೆ.
ಈ ಕುರಿತು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




