Yadgiri | ಶೇ.56 ರಷ್ಟು ಮೀಸಲಾತಿ ಅನ್ವಯ ಹುದ್ದೆಗಳನ್ನು ಭರ್ತಿ ಮಾಡಿ : ಮಾಜಿ ಸಂಸದ ಉಗ್ರಪ್ಪ ಆಗ್ರಹ

ಯಾದಗಿರಿ : ಶೇ.56ರಷ್ಟು ಮೀಸಲಾತಿ ನೀಡಿ ಖಾಲಿ ಇರುವ ಎಲ್ಲಾ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ವೇಳೆ ಹೆಚ್ಚಿಸಲಾದ ಮೀಸಲಾತಿಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಒತ್ತಾಯಿಸಿದರು.
ಸೋಮವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಸರ್ವಪಕ್ಷಗಳ ಸಭೆ ಕರೆದು ಈ ಕುರಿತು ಚರ್ಚಿಸಿ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಶೇ.50ಕ್ಕಿಂತ ಹೆಚ್ಚಿನ ಮೀಸಲಾತಿ ನೀಡಬೇಕು. ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ಉಪಚುನಾವಣೆ ನಂತರ ಬೆಂಗಳೂರಿನಲ್ಲಿ ಅಹೋರಾತ್ರಿ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಸಿದರು. ಅವಕಾಶ ವಂಚಿತ ಸಮುದಾಯಗಳಿಗೆ ಪರಿಸ್ಥಿತಿಗೆ ಅನುಗುಣವಾಗಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಹೆಚ್ಚಿಸಬೇಕು ಎಂದು ಹೇಳಿದರು.
ಎಸ್‌ಟಿ ಸಮುದಾಯದ ಮೀಸಲಾತಿ ಶೇ.5ರಿಂದ ಶೇ.7ಕ್ಕೆ ಹೆಚ್ಚಾಗಿರುವುದು ಹೋರಾಟದ ಫಲವಾಗಿದೆ. ಜಸ್ಟಿಸ್ ನಾಗಮೋಹನ್ ದಾಸ್ ಸಮಿತಿಯ ಅಧ್ಯಯನ ವರದಿಯಲ್ಲಿ ಅನುಸೂಚಿತ ಜಾತಿ ಮತ್ತು ಪಂಗಡಗಳ ಸಾಕ್ಷರತೆ ಪ್ರಮಾಣ ಕಡಿಮೆಯಿರುವುದರಿಂದ ಹೆಚ್ಚಿನ ಮೀಸಲಾತಿ ಅಗತ್ಯವಿದೆ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಗೊಲ್ಲಪಲ್ಲಿಯ ವರದಾನಂದೇಶ್ವರ ಸ್ವಾಮಿಗಳು, ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಅಲ್ದಾಳ, ಸಾಹೇಬಗೌಡ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿ ಭೇಟಿ ಸಂದರ್ಭದಲ್ಲಿ ಕೋಲಿ, ಗೊಲ್ಲರ ಸೇರಿದಂತೆ ಹಲವು ಸಮುದಾಯಗಳನ್ನು ಎಸ್‌ಟಿಗೆ ಸೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಆ ಮಾತು ಉಳಿಸಿಕೊಳ್ಳಲಾಗಿಲ್ಲ ಎಂದು ಉಗ್ರಪ್ಪ ಆರೋಪಿಸಿದರು.
ಸಾಮಾಜಿಕ ನ್ಯಾಯ ಎಲ್ಲಿ? :
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಮಾಜಿಕ ನ್ಯಾಯದ ನಿಲುವು ಪ್ರಶ್ನಾರ್ಹವಾಗಿದೆ. ಸರ್ವಪಕ್ಷಗಳ ಸಭೆ ಕರೆದು ದೆಹಲಿಗೆ ತೆರಳಿ ವರದಿ ಸಲ್ಲಿಸಿ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ 36 ಎಸ್‌ಸಿ ಹಾಗೂ 18 ಎಸ್‌ಟಿ ಶಾಸಕರು ಇದ್ದರೂ, ತಮ್ಮ ಸಮುದಾಯಗಳ ಪರವಾಗಿ ಧ್ವನಿ ಎತ್ತುತ್ತಿಲ್ಲ ಎಂದು ಉಗ್ರಪ್ಪ ಕಿಡಿಕಾರಿದರು.






