Yadgir | ಉಚಿತ ಆರೋಗ್ಯ ಶಿಬಿರಗಳು ಬಡವರ ಬದುಕಿಗೆ ಆಶಾಕಿರಣ: ಶಾಸಕ ಚೆನ್ನಾರೆಡ್ಡಿ ಪಾಟೀಲ್

ಯಾದಗಿರಿ: ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಬಡ ಕುಟುಂಬಗಳ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸುವುದು ಸಮಾಜಸೇವೆಯ ಜೊತೆಗೆ ಆತ್ಮತೃಪ್ತಿ ನೀಡುವ ಕಾರ್ಯವಾಗಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ರಾಜಮಲ್ ಖೇಮರಾಜ್ ಭಂಡಾರಿ ಫೌಂಡೇಷನ್, ರಾಯಚೂರು, ಡಿಡಿಆರ್‌ಪಿ ಕೇಂದ್ರ ಹಾಗೂ ವಿಶ್ವಜ್ಯೋತಿ ವಿದ್ಯಾಸಂಸ್ಥೆ, ಕಲಬುರಗಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಕೃತಕ ಕಾಲು ವಿತರಣೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸುತ್ತಿದ್ದರೂ ಸಾವಿರಾರು ಬಡ ಕುಟುಂಬಗಳು ಇನ್ನೂ ಸಂಕಷ್ಟದಲ್ಲಿವೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರುವುದು ಅತ್ಯಂತ ಅಗತ್ಯವಾಗಿದೆ. ರಾಜ್ಯ ಸರ್ಕಾರ ಜಿಲ್ಲೆಗೆ 100 ಕೋಟಿ ರೂ. ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡಿದ್ದು, ಇದರಿಂದ ಜಿಲ್ಲೆಯ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೊಳಿಸಿರುವ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಖಾಸಗಿ ಸಂಘ-ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ಇಂತಹ ಆರೋಗ್ಯ ಶಿಬಿರಗಳು ರೋಗಿಗಳ ಬದುಕಿನಲ್ಲಿ ಹೊಸ ಭರವಸೆ ಮೂಡಿಸುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಸ್ತೆ ಅಪಘಾತ ಸೇರಿದಂತೆ ವಿವಿಧ ಕಾರಣಗಳಿಂದ ಕೈ ಮತ್ತು ಕಾಲು ಕಳೆದುಕೊಂಡಿದ್ದ ಹತ್ತಾರು ಫಲಾನುಭವಿಗಳಿಗೆ ಕೃತಕ ಕೈ ಹಾಗೂ ಕಾಲುಗಳನ್ನು ಜೋಡಿಸಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಲವೀಶ ಒರಡಿಯಾ, ಪ್ರಾಂಶುಪಾಲರಾದ ಡಾ. ಸುಭಾಷಚಂದ್ರ ಕೌಲಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ, ಜಿಲ್ಲಾ ವಿಕಲಚೇತನರ ಕಲ್ಯಾಣ ಅಧಿಕಾರಿ ಶರಣಪ್ಪ ಪಾಟೀಲ್, ವಿಶ್ವಜ್ಯೋತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಅಜಿತ್ ಕುಮಾರ ಜೈನ್, ಧನರಾಜ್ ದೋಖಾ, ಬಾಬು ದೋಖಾ, ಆರ್‌ಕೆ ಭಂಡಾರಿ ಫೌಂಡೇಷನ್‌ನ ರಾಯಚೂರ ಟ್ರಸ್ಟಿಗಳಾದ ವಿಜಯ ರಾಜ್ ಭಂಡಾರಿ, ಮೋಹನ್ ಕುಮಾರ ಭಂಡಾರಿ, ಡಾ. ಎಂ.ಡಿ.ರಿಯಾಜುದ್ದೀನ್, ಅಜಯಕುಮಾರ ಭಂಡಾರಿ ಸೇರಿದಂತೆ ವೈದ್ಯರ ಹಾಗೂ ಸಿಬ್ಬಂದಿಗಳ ತಂಡ ನೂರಾರು ರೋಗಿಗಳ ಆರೋಗ್ಯ ತಪಾಸಣೆ ಮಾಡಿ, ಅಗತ್ಯ ಸಲಹೆ ಸೂಚನೆ ನೀಡಿದರು.






