Yadgir | ರೈತರ ಸಂಕಷ್ಟಕ್ಕೆ ಸರಕಾರ ಸ್ಪಂದಿಸಲಿ: ಮಾಜಿ ಸಚಿವ ರಾಜುಗೌಡ ಆಗ್ರಹ

ಯಾದಗಿರಿ: ಮಳೆ ಕೊರತೆಯಿಂದ ಜಿಲ್ಲೆಯ ರೈತರು ತೀವ್ರ ಸಂಕಷ್ಟದಲ್ಲಿದ್ದು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಶಾಸಕರು ಸಚಿವ ಸ್ಥಾನಕ್ಕಾಗಿ ಕಾಯುವುದನ್ನು ಬಿಟ್ಟು ಹಳ್ಳಿಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ ಆತ್ಮಹತ್ಯೆಗಳನ್ನು ತಡೆಯುವ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ರಾಜುಗೌಡ ಆಗ್ರಹಿಸಿದರು.
ತಾಲೂಕಿನ ಚಟ್ಟಳ್ಳಿ ಗ್ರಾಮಕ್ಕೆ ಮಂಗಳವಾರ ಬಿಜೆಪಿ ಮುಖಂಡರ ನಿಯೋಗದೊಂದಿಗೆ ಭೇಟಿ ನೀಡಿ, ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತ ಮಲ್ಲಿಕಾರ್ಜುನ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಒಂದೇ ವಾರದಲ್ಲಿ ಚಟ್ಟಳ್ಳಿ ಗ್ರಾಮದಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕಳೆದ ಒಂದೂವರೆ ತಿಂಗಳಿಂದ ಸಮರ್ಪಕ ಮಳೆಯಾಗದ ಕಾರಣ ಬಿತ್ತಿದ ಬೆಳೆಗಳು ಒಣಗುತ್ತಿವೆ. ಆದರೂ ರಾಜ್ಯ ಸರ್ಕಾರ ರೈತರ ಸಂಕಷ್ಟದತ್ತ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕೃಷಿ ಇಲಾಖೆಗೆ ಸಮರ್ಪಕ ಗಮನ ನೀಡಲಾಗುತ್ತಿಲ್ಲ. ಸರ್ಕಾರದ ಸಚಿವರು ಬೇರೆ ವಿಚಾರಗಳಿಗೆ ಆದ್ಯತೆ ನೀಡುತ್ತಿದ್ದು, ಅನ್ನದಾತರ ನೆರವಿಗೆ ಧಾವಿಸುತ್ತಿಲ್ಲ. ಸರ್ಕಾರ ತಕ್ಷಣ ರೈತರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಬಿಜೆಪಿ ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಪ್ರತಿಕ್ರಿಯಿಸಿದ ಅವರು, ರೈತರ ಒಪ್ಪಿಗೆ ಪಡೆದು ಯೋಜನೆ ಜಾರಿಗೊಳಿಸಬೇಕು. ದಲ್ಲಾಳಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಯಾವುದೇ ಯೋಜನೆ ಜಾರಿಯಾಗಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ಅವರು ಆತ್ಮಹತ್ಯೆ ಮಾಡಿಕೊಂಡ ರೈತ ಮಲ್ಲಿಕಾರ್ಜುನ ಅವರ ಪತ್ನಿ ಹಾಗೂ ಮಕ್ಕಳಿಗೆ ವೈಯಕ್ತಿಕವಾಗಿ 51 ಸಾವಿರ ರೂ. ಆರ್ಥಿಕ ನೆರವು ನೀಡಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಹೇಶರೆಡ್ಡಿ ಮುದ್ನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರುಶುರಾಮ ಕುರಕುಂದಾ, ಬಿಜೆಪಿ ಯುವ ಘಟಕದ ಜಿಲ್ಲಾಧ್ಯಕ್ಷ ಶ್ರೀಧರ ಸಾಹುಕಾರ, ಭೀಮಣ್ಣಗೌಡ ಖ್ಯಾತನಾಳ, ಸಿದ್ದಣ್ಣಗೌಡ ಕಾಡಂನೊರ, ಡಾ. ಚಂದ್ರಶೇಖರ ಸುಬೇದಾರ, ವಿಜಯಕುಮಾರ ಸಾಹುಕಾರ, ಸುರೇಶ ಮಾಲಿಪಾಟೀಲ್, ಬಸವರಾಜ ಸೊನ್ನದ, ಸೋಮಯ್ಯ ಸ್ವಾಮಿ ಹಿರೇಮಠ, ಚಂದಪ್ಪ ಕಾವಲಿ, ರಾಜಶೇಖರ ಕಾಡಂನೂರ ಸೇರಿದಂತೆಯೇ ಇತರರಿದ್ದರು.






