ಯಾದಗಿರಿ | ಮಕ್ಕಳನ್ನು ಅಂಗನವಾಡಿ ಕೇಂದ್ರದಲ್ಲಿ ಕೂಡಿಹಾಕಿ ಜಮೀನು ಕೆಲಸಕ್ಕೆ ಹೋದ ಸಹಾಯಕಿಯ ಅಮಾನತು

ಯಾದಗಿರಿ: ಪಟ್ಟಣದ ಬೂದೂರು ಗ್ರಾಮದ 1ನೇ ಅಂಗನವಾಡಿ ಕೇಂದ್ರದ ಸಹಾಯಕಿ ಸಾವಿತ್ರಮ್ಮರನ್ನು ಕರ್ತವ್ಯಲೋಪದಡಿ ಗೌರವಧನಸೇವೆಯ ಮಾನ್ಯತಾ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಸಿ.ಡಿ.ಪಿ.ಓ ಶರಣಬಸವ ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ವಲಯ ಮೇಲ್ವಿಚಾರಕಿ ಗಂಗೂಬಾಯಿ ರವರು ಜಂಟಿಯಾಗಿ ದಿನಾಂಕ ಆ.1ರಂದು ಬೂದುರು ಗ್ರಾಮದ-01ನೇ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದಾಗ ಅಂಗನವಾಡಿ ಸಹಾಯಕಿಯು ಜು.30 ರಂದು ಅಂಗನವಾಡಿ ಕಾರ್ಯಕರ್ತೆ ಅಥವಾ ಮೇಲಾಧಿಕಾರಿಗಳ ಅನುಮತಿ ಪಡೆಯದೇ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳನ್ನು ಬಿಟ್ಟು ಹೋಗಿರುವುದು ಕಂಡುಬಂದಿರುತ್ತದೆ ಎಂದು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಅಂಗನವಾಡಿ ಕಾರ್ಯಕರ್ತೆಯು ವಲಯ ಸಭೆಗೆ ಹೋಗಿರುವಾಗ ಅಂಗನವಾಡಿ ಸಹಾಯಕಿಯು ಮಕ್ಕಳ ಪಾಲನೆ, ಯೋಗಕ್ಷೇಮ ಹಾಗೂ ರಕ್ಷಣೆಯ ಸಂಪೂರ್ಣ ಜವಾಬ್ದಾರಿ ಹೊಂದಿದವರಾಗಿದ್ದು, ಆದರೆ ಅಂಗನವಾಡಿ ಕೇಂದ್ರದ ಮಕ್ಕಳನ್ನು ಕೇಂದ್ರದಲ್ಲಿರುವಾಗಲೇ ಮುಖ್ಯದ್ವಾರದ ಬೀಗವನ್ನು ಹಾಕಿಕೊಂಡು ಕೇಂದ್ರವನ್ನು ಬಿಟ್ಟು ಹೋಗಿ ಕರ್ತವ್ಯದಲ್ಲಿ ನಿರ್ಲಕ್ಷ್ಯತನ, ಮಕ್ಕಳ ಬಗ್ಗೆ ಬೇಜವಾಬ್ದಾರಿತನ ಮನಗೊಂಡು ಗೌರವಧನ ಸೇವೆಯ ಮಾನ್ಯತಾ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಸಿ.ಡಿ.ಪಿ.ಓ.ಶರಣಬಸವ ಅವರು ತಿಳಿಸಿದ್ದಾರೆ.





