ಯಾದಗಿರಿ | ನಗರದ ಹಲವೆಡೆ ನೂತನವಾಗಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯಗಳ ಉದ್ಘಾಟನೆ

ಯಾದಗಿರಿ : ನಗರದ ವಿವಿಧ ಮುಖ್ಯ ಸ್ಥಳಗಳಲ್ಲಿ ನಿರ್ಮಾಣಗೊಂಡಿರುವ ಸಾರ್ವಜನಿಕ ಶೌಚಾಲಯವನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.
2023-24ನೇ ಸಾಲಿನ ಎಸ್ ಬಿಎಮ್ 2.0 ಅನುದಾನದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಹಾಗೂ ಲುಂಬಿನಿ ಉದ್ಯಾನವನದ ಬಳಿ ಸುಮಾರು 30ಲಕ್ಷ ಅನುದಾನದಲ್ಲಿ ನಿರ್ಮಿಸಿದ ಅನ್ಸ್ಪಿರೇಷನಲ್ ಶೌಚಾಲಯ ಹಾಗೂ ಫಿಲ್ಟರ್ ಬೆಡ್ ಗಾರ್ಡನ್ ಹತ್ತಿರ 2.50 ಲಕ್ಷ ಅನುದಾನದಲ್ಲಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಶೌಚಾಲಯಗಳ ಉಸ್ತುವಾರಿ ವಹಿಸಿಕೊಂಡವರು ಸದಾ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕಲುಷಿತ ಗಬ್ಬೆದ್ದು ನಾರುವಂತ ಸ್ಥಿತಿಗೆ ಶೌಚಾಲಯಗಳು ತಲುದಂತೆಯೇ ನಿರ್ವಹಣೆ ಮಾಡಬೇಕೆಂದು ಶಾಸಕರು ಹೇಳಿದರು.
ಜಿಲ್ಲಾಧಿಕಾರಿ ಹರ್ಷಲ್ ಬೊಯರ್ ಮಾತನಾಡಿ, ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಅವಶ್ಯಕತೆ ಸಾಕಷ್ಟು ಇತ್ತು. ಇದನ್ನು ಮನಗಂಡು ನಗರದ ಮೂರು ಕಡೆ ಶೌಚಾಲಯ ನಿರ್ಮಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಈ ವೇಳೆ ಯುಡಾ ಅಧ್ಯಕ್ಷರಾದ ಬಾಬುರಾವ ಕಾಡ್ಲೂರ್, ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕರಾದ ಲಕ್ಷಿಕಾಂತ ರೆಡ್ಡಿ, ಪೌರಾಯುಕ್ತರಾದ ಉಮೇಶ್ ಚವ್ಹಾಣ, ಸಹಾಯಕ ಕಾರ್ಯಪಾಲ ಅಭಿಯಂತರರಾದ ವಿಶ್ವನಾಥರೆಡ್ಡಿ, ಪರಿಸರ ಅಭಿಯಂತರಾದ ಪ್ರಶಾಂತ್, ಕಿರಿಯ ಸಹಾಯಕ ಅಭಿಯಂತರರಾದ ಲೊಕೇಶ್ವರಿ, ತಾಯಪ್ಪ ಯಾದವ್, ಕಿರಿಯ ಆರೋಗ್ಯ ನಿರಿಕ್ಷಕರಾದ ಶಿವಪುತ್ರ, ಮಂಜುನಾಥ ಉಪಸ್ಥಿತರಿದ್ದರು.







