ಯಾದಗಿರಿ | 2025ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲು ಡಿ.ಸಿ ಸೂಚನೆ

ಯಾದಗಿರಿ : ಬರುವ ಮಾ.21 ರಿಂದ ಏ.4 ರವರೆಗೆ ನಡೆಯಲಿರುವ 2025 ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆ -01 ನಕಲುಮುಕ್ತ ಹಾಗೂ ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು 2025 ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆ-01 ಗೆ ಸಂಬಂಧಿಸಿದಂತೆ ನಡೆದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬರುವ ಮಾ.21ರಿಂದ ಏ.4ರವರೆಗೆ ಸಡೆಸಲಾಗುವ ಈ ಪರೀಕ್ಷೆ ಸಂದರ್ಭದಲ್ಲಿ ಯಾವುದೇ ರೀತಿಯ ನಕಲಿನಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಡೆಸಲು ಸಂಬಂಧಿಸಿದ ಅಧಿಕಾರಿಗಳು ಸಕಲ ಕ್ರಮಗಳನ್ನು ಅಚ್ಚುಕಟ್ಟಾಗಿ ಕೈಗೊಳ್ಳುವಂತೆ ಸೂಚನೆ ನೀಡಿದರು.
ಯಾದಗಿರಿ ಜಿಲ್ಲೆಯಲ್ಲಿ ಈ ಪರೀಕ್ಷೆಗಾಗಿ ಒಟ್ಟು 62 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು,ಈ ಪರೀಕ್ಷೆ ಕೇಂದ್ರ ಗಳಲ್ಲಿ 31 ಗ್ರಾಮೀಣ ಹಾಗೂ 31 ನಗರ ಪರೀಕ್ಷೆ ಕೇಂದ್ರಗಳಾಗಿವೆ. 9 ಸೂಕ್ಷ್ಮ ಕೇಂದ್ರಗಳಾಗಿವೆ. ಶಹಾಪುರದಲ್ಲಿ 3 ಹಾಗೂ ಸುರಪುರದಲ್ಲಿ 6 ಸೂಕ್ಷ್ಮ ಪರೀಕ್ಷೆ ಕೇಂದ್ರಗಳಾಗಿವೆ. ಜಿಲ್ಲೆಯಲ್ಲಿ ಒಟ್ಟು 18017 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 9,249 ಗಂಡು ಹಾಗೂ 8,768 ಹೆಣ್ಣು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.
ಜಿಲ್ಲೆಯಲ್ಲಿ 62 ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯಸ್ಥರನ್ನಾಗಿ, 62 ಸ್ಥಳೀಯ ಜಾಗೃತ ದಳದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪರೀಕ್ಷೆ ಮಂಡಳಿಯ ಮಾರ್ಗಸೂಚಿಯಂತೆ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲಾ ವೆಬ್ಕಾಸ್ಟಿಂಗ್ ತಂಡಗಳನ್ನು ರಚಿಸಲಾಗಿದೆ. ಈ ಕುರಿತು ಯಾರಾದರೂ ಅಡ್ಡಿಪಡಿಸಿದಲ್ಲಿ ನೇರವಾಗಿ ಪೋಲಿಸ್ ಇಲಾಖೆಗೆ ದೂರು ನೀಡಬೇಕು. ಜಾಗೃತ ದಳ ತಂಡಗಳನ್ನು ರಚಿಸಲಾಗಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲೂ 200ಮೀ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ತಿಳಿಸಿ ಸೂಕ್ತ ಪೋಲಿಸ್ ಬಂದೋಬಸ್ತ್ ಸಹ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ವಿದ್ಯಾರ್ಥಿಗಳ ಆರೋಗ್ಯ ಹಿತದೃಷ್ಟಿಯಿಂದ ಪರೀಕ್ಷೆ ಕೇಂದ್ರ ಗಳಲ್ಲಿ ನುರಿತ ಆರೋಗ್ಯ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಪ್ರಶ್ನೆ ಪತ್ರಿಕೆ ಹಾಗೂ ಗೌಪ್ಯ ಸಾಮಗ್ರಿಗಳನ್ನು ಭದ್ರತೆಯಲ್ಲಿ ನಿರ್ವಹಿಸಲು ಅವರು ಸೂಚಿಸಿದರು.
ಪರೀಕ್ಷೆ ಕಾರ್ಯಗಳಿಗೆ ನೇಮಕಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾತ್ರ ಕೇಂದ್ರದಲ್ಲಿ ಉಪಸ್ಥಿತರಿರಬೇಕು. ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಬೇಕು. ಅನ್ಯ ವ್ಯಕ್ತಿಗಳು ಕೇಂದ್ರದಲ್ಲಿ ಕಂಡು ಬಂದಲ್ಲಿ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಈ ಪರೀಕ್ಷೆ ಸಂದರ್ಭದಲ್ಲಿ ಪರೀಕ್ಷಾರ್ಥಿಗಳು ಎಲೆಕ್ಟ್ರಾನಿಕ್ ವಸ್ತುಗಳು ಮೋಬೈಲ್, ಪೆನ್ ಡ್ರೈವ್ ಗಳು,ಇಯರ್ ಫೋನ್ಗಳು, ಮೈಕ್ರೋಫೋನ್,ಬ್ಲೂಟೂಥ್ ಸಾಧನಗಳು, ಕೈಗಡಿಯಾರ ಗಳನ್ನು ಉಪಯೋಗಿಸುವುದನ್ನು ನಿಷೇಧಿಸಲಾಗಿದೆ.
ಪರೀಕ್ಷೆ ಕೇಂದ್ರಗಳ ಸುತ್ತಲೂ ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಬೇಕು. ಕೊಠಡಿ ಮೇಲ್ವಿಚಾರಣೆ ನೋಡಿಕೊಳ್ಳಬೇಕು. ವೆಬ್ ಕಾಸ್ಟಿಂಗ್ ಅಳವಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಾಗಲಿ, ಸಿಬ್ಬಂದಿಗಳಾಗಲಿ ಮೊಬೈಲ್ ಫೋನುಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೊಠಡಿಗಳ ಹೊರಗೆ ಅಲ್ಪ ದೂರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇರಬೇಕು. ಗೌಪ್ಯ ಸಾಮಗ್ರಿಗಳನ್ನು ನಿಯಮಾವಳಿಗಳಂತೆ ನಿರ್ವಹಣೆ ಮಾಡಬೇಕು.
ಪರೀಕ್ಷೆ ವೇಳಾಪಟ್ಟಿಯಂತೆ ಗೌಪ್ಯ ಸಾಮಗ್ರಿಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ತಲುಪಿಸಲು ವಿಶೇಷ ಪ್ರಶ್ನೆ ಪತ್ರಿಕೆ ಮಾರ್ಗಾ ಧಿಕಾರಿಗಳ ತಂಡವನ್ನು ರಚಿಸಲಾಗಿದೆ.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಶೇಖರ ಮುಧೋಳ ಸ್ವಾಗತಿಸಿ ಪರೀಕ್ಷೆ ಕುರಿತು ವಿವರಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಜಿಲ್ಲಾ ಖಜಾನೆ ಇಲಾಖೆ ಉಪನಿರ್ದೇಶಕ ಮಾಳಿಂಗರಾಯ, ಡಯಟ್ ಪ್ರಾಚಾರ್ಯ ಬಿ.ಎಂ. ಹೊಸಮನಿ ಉಪಸ್ಥಿತರಿದ್ದರು.