ಯಾದಗಿರಿ | ಅಕ್ಕಮಹಾದೇವಿ ಮಹಿಳಾ ಸಹಕಾರಿ ಸಂಘದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಮಹಿಳೆಯರು ಶಿಕ್ಷಣ ಜೊತೆ ವಿಶೇಷ ತರಬೇತಿ ಪಡೆದು ಸಬಲರಾಗಿ : ಶಕುಂತಲಾ ಬೆಲ್ದಾಳೆ

ಸುರಪುರ : ಮಹಿಳೆಯರು ಶಿಕ್ಷಣದ ಜೊತೆಗೆ ವಿಶೇಷ ತರಬೇತಿಗಳನ್ನು ಪಡೆಯುವ ಮೂಲಕ ಉದ್ಯೋಗ ನಿರ್ವಾಹಣೆಯ ಜೊತೆಗೆ ಆರ್ಥಿಕ ಪ್ರಗತಿ ಹೊಂದುತ್ತಾ ಸಬಲರಾಗಿ ಎಂದು ಕರ್ನಾಟಕ ರಾಜ್ಯ ಮಹಿಳಾ ಸಹಕಾರಿ ಮಹಾ ಮಂಡಳಿ ಅಧ್ಯಕ್ಷರಾದ ಶಕುಂತಲಾ ಬೆಲ್ದಾಳೆ ಹೇಳಿದರು.
ರಂಗಂಪೇಟೆಯ ಬಸವಪ್ರಭು ತರಬೇತಿ ಕೇಂದ್ರದ ಆವರಣದಲ್ಲಿ ಅಕ್ಕಮಹಾದೇವಿ ಮಹಿಳಾ ಸಹಕಾರಿ ಸಂಘ ರಂಗಂಪೇಟ ವತಿಯಿಂದ ಆಯೋಜಿಸಿದ್ದ, ಅಂತರರಾಷ್ಟ್ರೀಯ ಮಹಿಳಾ ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಇಂದು ಸ್ಪರ್ಧೆ ಮಾಡುತ್ತಿದ್ದು, ಕುಟುಂಬದ ನಿರ್ವಾಹಣೆ ಜೊತೆಗೆ ಉದ್ಯೋಗದ ಜವಬ್ದಾರಿ ಕೂಡ ಅನೇಕರು ನಿರ್ವಹಿಸುತ್ತಿದ್ದಾರೆ, ಸರ್ವಕ್ಷೇತ್ರದಲ್ಲೂ ಪ್ರಗತಿ ಸಾಧಿಸುತ್ತಿರುವ ನಮ್ಮ ಮಹಿಳೆಯರು ತ್ಯಾಗದ ಪ್ರತಿರೂಪ, ಕರುಣೆ, ಮಮತೆ, ಪ್ರೀತಿ, ವಾತ್ಸಲ್ಯಗಳ ತವ ನಿಧಿಯಾಗಿದ್ದಾರೆ ಎಂದ ಅವರು, ಸಹಕಾರಿ ಕ್ಷೇತ್ರದಲ್ಲಿಯೂ ಕೂಡ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಿ ಎಂದು ಹೇಳಿದರು.
ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಡಾ.ಸುರೇಶ ಸಜ್ಜನ್, ಮಹಿಳೆಯರು ವಿದ್ಯಾಭ್ಯಾಸದ ಜೊತೆಗೆ ಗೃಹ ಕೈಗಾರಿಕೆ, ಗುಡಿಕೈಗಾರಿಕೆ ಹಾಗೂ ಹೊಲಿಗೆ ತರಬೇತಿ ಸೇರಿದಂತೆ ಅನೇಕ ಕೆಲಸಗಳನ್ನು ನಿರ್ವಹಿಸಿ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಅತಿಥಿಗಳಾಗಿ ಜಿಲ್ಲಾ ಸಹಕಾರಿ ಒಕ್ಕೂಟ ಯುನಿಯನ್ ಅಧ್ಯಕ್ಷ ವಿಶ್ವನಾಥ ರೆಡ್ಡಿ ದರ್ಶನಾಪೂರ ಹಾಗೂ ಒಕ್ಕೂಟದ ನಿರ್ದೇಶಕ ಕೆಂಚಪ್ಪ ನಗನೂರು ಹಾಗೂ ವೃತ್ತಿಪರ ನಿರ್ದೇಶಕ ಪ್ರಕಾಶ ಅಂಗಡಿ ಕನ್ನೆಳ್ಳಿ, ಪ್ರಮುಖರಾದ ಶಾಂತಗೌಡ ಪಾಟೀಲ್, ಶಂಕರಗೌಡ ಪಾಟೀಲ್, ಸಹಕಾರಿ ಸಂಘದ ಅಧ್ಯಕ್ಷೆ ಚನ್ನಮ್ಮ ಪ್ರಕಾಶ ಅಂಗಡಿ, ಉಪಾಧ್ಯಕ್ಷೆ ನಿಲಾಂಬಿಕೆ ಸಿದ್ದನಗೌಡ ಪಾಟೀಲ್, ನಿರ್ದೇಶಕರುಗಳಾದ ಸುನೀತಾ ಸಿದ್ದನಗೌಡ ಪಾಟೀಲ್, ಪ್ರಿಯಾಂಕ ನವೀನ ಜುಜಾರೆ, ಸೌಭಾಗ್ಯ ಪ್ರವೀಣ ಜುಜಾರೆ, ಮೇಘಾ ದಾಯಿಪುಲ್ಲೆ, ಶೃತಿ ಹಿರೇಮಠ ವೇದಿಕೆ ಮೇಲಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಮಹಿಳಾ ಸಾಧಕರುಗಳನ್ನು ಸನ್ಮಾನಿಸಲಾಯಿತು ಹಾಗೂ ಶಕುಂತಲಾ ಬೆಲ್ದಾಳೆ ಅವರನ್ನು ರಾಜ್ಯ ಮಟ್ಟದ ಅಕ್ಕಮಾಹಾದೆ ಸೇವಾ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೆ ಸಂದರ್ಭದಲ್ಲಿ ಮಹಿಳೆಯರಿಗಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ದೆ, ಭಾಷಣ ಸ್ಪರ್ದೆ, ಗಾಯನ ಸ್ಪರ್ದೆ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಶೃತಿ ಹಿರೇಮಠ ನಿರೂಪಿಸಿ ವಂದಿಸಿದರು.







