Yadgir | ಪತ್ರಕರ್ತರು ಜನರ ವಿಶ್ವಾಸ ಉಳಿಸಿಕೊಳ್ಳುವುದು ಅಗತ್ಯವಿದೆ : ಸಂಕೀನ್

ಯಾದಗಿರಿ: ಜಿಲ್ಲಾ ಕೋಲಿ ಮತ್ತು ಕಬ್ಬಲಿಗ ಸಮಾಜದ ವತಿಯಿಂದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ಸತತ ಎರಡನೇ ಬಾರಿಗೆ ಆಯ್ಕೆಯಾದ ಮಲ್ಲಪ್ಪ ಸಂಕೀನ್ ಅವರಿಗೆ ಸನ್ಮಾನಿಸಲಾಯಿತು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗೋಸಿ ನೇತೃತ್ವದಲ್ಲಿ ಸನ್ಮಾನ ನೆರವೇರಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಲ್ಲಪ್ಪ ಸಂಕೀನ್, ಸಮಾಜದಲ್ಲಿ ಪತ್ರಕರ್ತರ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದು, ಆ ನಂಬಿಕೆಯನ್ನು ಉಳಿಸಿಕೊಂಡು ಕಾರ್ಯನಿರ್ವಹಿಸಲಾಗುವುದು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರದ ಮೇಲೆ ಜನರು ನಂಬಿಕೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಎಚ್ಚರಿಕೆಯಿಂದ ಕೆಲಸ ಮಾಡುವುದು ಅಗತ್ಯವಾಗಿದೆ. ಧ್ವನಿಯಿಲ್ಲದವರ ಧ್ವನಿಯಾಗುವುದು ಪತ್ರಕರ್ತರ ಜವಾಬ್ದಾರಿ ಎಂದು ಅವರು ಅಭಿಪ್ರಾಯಪಟ್ಟರು.
ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಗೋಸಿ, ಸಮಾಜ ಸುಧಾರಣೆಯಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಾಧ್ಯಮ ಕ್ಷೇತ್ರದ ಮೂಲಕ ಎಲ್ಲ ಕ್ಷೇತ್ರಗಳಲ್ಲೂ ಸುಧಾರಣೆ ತರಲು ಸಾಧ್ಯವಿದೆ ಎಂದು ಹೇಳಿದರು.
ಕಳೆದ ಒಂದು ದಶಕಕ್ಕೂ ಅಧಿಕ ಕಾಲದಿಂದ ಜಿಲ್ಲೆಯ ಮಾಧ್ಯಮ ಕ್ಷೇತ್ರದಲ್ಲಿ ಮಲ್ಲಪ್ಪ ಸಂಕೀನ್ ಅವರು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದು, ವೃತ್ತಿಯಲ್ಲಿ ಖಡಕ್ ಪತ್ರಕರ್ತ ಎಂಬ ಹೆಗ್ಗಳಿಕೆ ಪಡೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಭೀಮರಡ್ಡಿ, ನಿಂಗಪ್ಪ ಜಾಲಗಾರ, ಶರಣು ಪಟೇದಾರ ಆಶನಾಳ, ಮಲ್ಲು ಪೂಜಾರಿ, ಬಸವರಾಜ ಕೊಲ್ಲೂರು, ಮುದುಕಪ್ಪ ಚಾಮನಾಳ, ದೇವೇಂದ್ರಪ್ಪ ಪಸ್ಪುಲ್, ಮಹೇಶ್ ಕುಮಾರ್ ಬಾಡಿಹಾಳ, ಅಯ್ಯಾ ನಾಯ್ಕೋಡಿ ಸೇರಿದಂತೆ ಇನ್ನಿತರರಿದ್ದರು.






