ಯಾದಗಿರಿ | ಬರ ಪಟ್ಟಿಗೆ ಹುಣಸಗಿ ತಾಲೂಕು ಸೇರ್ಪಡೆಗೆ ಕರವೇ ಒತ್ತಾಯ

ಹುಣಸಗಿ: ರಾಜ್ಯ ಸರಕಾರ ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕು ಒಂದೇ ಬರಪೀಡಿತ ತಾಲೂಕು ಎಂದು ಘೋಷಿಸಿ ಸುರಪುರ ಹಾಗೂ ಹುಣಸಗಿ ತಾಲೂಕು ಬರಪೀಡಿತ ತಾಲೂಕುಗಳೆಂದು ಘೋಷಿಸದೆ ಇರುವುದರಿಂದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಕರವೇ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ತಹಶೀಲ್ದಾರ್ ಎಂ.ಬಸವರಾಜ ಅವರ ಮೂಲಕ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ರಮೇಶ್ ಬಿರದಾರ ಮಾತನಾಡಿ, ಸರ್ಕಾರ ಗುರುವಾರ ಘೋಷಣೆ ಮಾಡಿದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಸುರಪುರ ಹಾಗೂ ಹುಣಸಗಿ ತಾಲೂಕಿನ ಹೆಸರಿಲ್ಲದಿರುವುದು ತುಂಬಾ ಕಳವಳಕಾರಿ ಸಂಗತಿಯಾಗಿದೆ. ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ತೊಗರಿ ಮತ್ತು ಹತ್ತಿ ಮಳೆ ಕೊರತೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ರೈತರು ಈಗಾಗಲೇ ಸಾಲ ಮಾಡಿ ಬಿತ್ತನೆ ಮಾಡಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಬೆಳೆಗಳು ಒಣಗುತ್ತಿವೆ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕಾದ ಸರ್ಕಾರವೇ ಸುರಪುರ ಹಾಗೂ ಹುಣಸಗಿ ತಾಲೂಕು ಬರಗಾಲ ಪಟ್ಟಿಯಿಂದ ಹೊರಗಿಟ್ಟಿರುವುದು ರೈತ ವಿರೋಧಿ ಧೋರಣೆಯನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮತ್ತೊಮ್ಮೆ ಪರಿಶೀಲನೆ ನಡೆಸಿ ಸುರಪುರ ಹಾಗೂ ಹುಣಸಗಿ ತಾಲೂಕುಗಳು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿ ರೈತರ ಹಿತಕಾಪಾಡಬೇಕು ಎಂದು ಅವರು ಒತ್ತಾಯಿಸಿದರು.




