ಯಾದಗಿರಿ | ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಕಾರ್ಮಿಕ ಇಲಾಖೆಯಿಂದ ಜಾಗೃತಿ

ಯಾದಗಿರಿ: ಓದುವ ವಯಸ್ಸಿನ ಮಕ್ಕಳನ್ನು ಕೂಲಿಗೆ ಕಳುಹಿಸದೆ ಶಾಲೆಗೆ ಕಳುಹಿಸುವಂತೆ ಕಾರ್ಮಿಕ ಇಲಾಖೆಯಿಂದ ಆಟೋ, ಟಂಟಂಗಳ ಚಾಲಕರಿಗೆ ಅರಿವು ಮೂಡಿಸಲಾಯಿತು.
ಯಾದಗಿರಿ ಜಿಲ್ಲೆಯ ಮುದ್ನಾಳ ವೃತ್ತದ ಮಾರ್ಗವಾಗಿ ಆಟೋ, ಟಂಟಂಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆಂಬ ಮಾಹಿತಿಯ ಮೇರೆಗೆ ಕಾರ್ಮಿಕ ಇಲಾಖೆಯಿಂದ ಹಠಾತ್ ದಾಳಿ, ತಪಾಸಣೆ ನಡೆಯಿತು. ಕೂಲಿ ಕೆಲಸಕ್ಕಾಗಿ ಆಟೋಗಳಲ್ಲಿ ತೆರಳುತ್ತಿದ್ದ ಸುಮಾರು 10ಕ್ಕೂ ಹೆಚ್ಚು ಮಕ್ಕಳನ್ನು ಶಾಲೆಗೆ ಹೊಗುವಂತೆ ತಿಳುವಳಿಕೆ ನೀಡಿ ಸ್ವಗ್ರಾಮಕ್ಕೆ ಕಳುಹಿಸಲಾಯಿತು. ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋಗಿದ್ದ ವಾಹನಗಳ ಮಾಲಕರ ವಿರುದ್ಧ ಆರ್.ಟಿ.ಓ ಅಧಿಕಾರಿಗಳ ಮೂಲಕ ಪ್ರಕರಣ ದಾಖಲಿಸಲಾಯಿತು.
“ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ1986, ತಿದ್ದುಪಡಿ 2016”ರ ಕುರಿತು ಜಾಗೃತಿ ಮೂಡಿಸಲಾಯಿತು ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ರಿಯಾಜ್ ಪಟೇಲ್ ವರ್ಕನಳ್ಳಿ ಹೇಳಿದರು.
ಯಾದಗಿರಿ ಕಾರ್ಮಿಕ ನಿರೀಕ್ಷಕರಾದ ಸಂಗೀತಾ ಹೊನ್ನೂರು ಮಾತನಾಡಿ, ಓದುವ ಮಕ್ಕಳನ್ನು ಕೂಲಿಗೆ ಕಳುಹಿಸಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ಹಾನಿ ಮಾಡದೆ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಿ ಎಂದು ಪಾಲಕ, ಪೋಷಕರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ನಿರೀಕ್ಷಕರಾದ ಪ್ರಭಾಕರ್, ಮಾಳಪ್ಪ ಪೂಜಾರಿ, ಶಿರಸಪ್ಪ, ನರಸಪ್ಪ, ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಪ್ರಾನ್ಸಿಸ್ ಶಾಭು, ಗೃಹ ರಕ್ಷಕ ದಳದ ಚಂದ್ರಶೇಖರ್ ಮುದ್ನಾಳ, ಕಾರ್ಮಿಕ ಇಲಾಖೆಯ ಬಾಲು ನಾಯಕ್, ವೆಂಕಟೇಶ ಶಿವಾಂಗೆ ಉಪಸ್ಥಿತರಿದ್ದರು.







