ಯಾದಗಿರಿ | "ಚಿಕಿತ್ಸೆ ವೇಳೆ ಹಲ್ಲಿನೊಳಗೆ ಸೂಜಿ ಉಳಿಸಲಾಗಿದೆ": ದಂತ ವೈದ್ಯನ ವಿರುದ್ದ ಮಹಿಳೆ ದೂರು

ಸಾಂದರ್ಭಿಕ ಚಿತ್ರ
ಯಾದಗಿರಿ: ಚಿಕಿತ್ಸೆ ವೇಳೆ ಹಲ್ಲಿನೊಳಗೆ ಸೂಜಿ ಉಳಿಸಲಾಗಿದೆ ಎಂದು ಆರೋಪಿಸಿ ಶಹಾಪುರದ ದಂತ ವೈದ್ಯರ ವಿರುದ್ಧ ಮಹಿಳೆಯೊಬ್ಬರು ನೀಡಿದ ದೂರಿನ ಕುರಿತು ವೈದ್ಯಕೀಯ ಮಂಡಳಿ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಡಿಎಚ್ಒ) ಡಾ. ಮಹೇಶ್ ಬಿರಾದಾರ ತಿಳಿಸಿದ್ದಾರೆ.
ಈ ಕುರಿತು ಶುಕ್ರವಾರ ಸಂಜೆ ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಗರದ ಶ್ರೀಮಾತಾ ಮಾಣಿಕೇಶ್ವರಿ ನಗರದ ನಿವಾಸಿ ಚಂದ್ರಕಲಾ ಬಾಗ್ಲಿ ಎಂಬವರು ಶಹಾಪುರ ನಗರದ ಡೆಂಟಲ್ ಕ್ಲಿನಿಕ್ನ ಡಾ. ಅತಿಕ-ಉರ್-ರಹಮಾನ್ ಎಂಬವರ ವಿರುದ್ಧ ದೂರು ನೀಡಿದ್ದರು. ಮೇ 5ರಂದು ಹಲ್ಲು ನೋವಿನ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸಿದ್ದು, ಚಿಕಿತ್ಸೆಯ ವೇಳೆ ಹಲ್ಲಿನೊಳಗೆ ಸೂಜಿ ಹಾಕಲಾಗಿದೆ ಎಂದು ತಿಳಿಸಿದ್ದರು. ಬಳಿಕ ನೋವು ಮುಂದುವರಿದ ಹಿನ್ನೆಲೆಯಲ್ಲಿ ಆಗಸ್ಟ್ 11ರಂದು ಮತ್ತೆ ಭೇಟಿ ನೀಡಿದಾಗ ಹಲ್ಲಿನೊಳಗೆ ಸೂಜಿ ಇರುವುದಾಗಿ ತಿಳಿಸಿ, ಹಲ್ಲು ತೆಗೆಯಬೇಕಾಗಬಹುದು ಎಂದು ವೈದ್ಯರು ಹೇಳಿರುವುದಾಗಿ ದೂರಿನಲ್ಲಿ ಆರೋಪಿಸಿದ್ದರು.
ದೂರಿನ ಹಿನ್ನೆಲೆಯಲ್ಲಿ ವೈದ್ಯರನ್ನು ಕರೆಸಿ ವಿಚಾರಣೆ ನಡೆಸಲಾಗಿದೆ. ವೈದ್ಯರು ನೀಡಿದ ಲಿಖಿತ ಹೇಳಿಕೆಯಲ್ಲಿ ರೋಗಿಗೆ ರೂಟ್ ಕೆನಾಲ್ ಮಾಡಲಾಗಿದ್ದು, ಚಿಕಿತ್ಸೆಯಲ್ಲಿ ಯಾವುದೇ ನಿರ್ಲಕ್ಷ್ಯವಾಗಿಲ್ಲ ಎಂದು ತಿಳಿಸಿದ್ದಾರೆ ಎಂದು ಡಿಎಚ್ ಒ ಮಹೇಶ್ ಬಿರಾದಾರ ಹೇಳಿದರು.
ಎಕ್ಸ್ರೇನಲ್ಲಿ ಕಾಣಿಸಿರುವುದು ಸೂಜಿ ಅಲ್ಲ. ರೂಟ್ ಕೆನಾಲ್ ಚಿಕಿತ್ಸೆಯ ವೇಳೆ ಬಳಸುವ ವಿಧಾನದಿಂದ ಹಾಗೆ ಕಾಣಿಸುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ತಜ್ಞ ವೈದ್ಯರ ಅಭಿಪ್ರಾಯ ಅಗತ್ಯವಿರುವುದರಿಂದ ಪ್ರಕರಣವನ್ನು ಯಾದಗಿರಿ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಮಂಡಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ವೈದ್ಯಕೀಯ ಮಂಡಳಿಯಲ್ಲಿ ದಂತ ವೈದ್ಯರು ಸೇರಿದಂತೆ ತಜ್ಞರು ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ. ವರದಿ ಆಧಾರದ ಮೇಲೆ ಕೆಪಿಎಂಇ ಕಾಯ್ದೆಯಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಡಾ. ಅತಿಕ-ಉರ್-ರಹಮಾನ್ ಅವರು ನಕಲಿ ವೈದ್ಯರಲ್ಲ. ಅವರು ಬಿಡಿಎಸ್ ವಿದ್ಯಾರ್ಹತೆ ಹೊಂದಿದ್ದು. ಕೆಪಿಎಂಇ ಕಾಯ್ದೆಯಡಿ ನೋಂದಣಿ ಪಡೆದಿದ್ದಾರೆ. ಚಿಕಿತ್ಸೆಯಲ್ಲಿ ನಿರ್ಲಕ್ಷ್ಯವಾಗಿದೆಯೇ ಎಂಬುದು ವೈದ್ಯಕೀಯ ಮಂಡಳಿ ವರದಿ ಬಳಿಕವೇ ಸ್ಪಷ್ಟವಾಗಲಿದೆ ಎಂದು ಡಿಎಚ್ ಒ ತಿಳಿಸಿದರು.
ಈ ನಡುವೆ ಮಹಿಳೆಯು "ನನಗೆ ಹಲ್ಲು ನೋವು ಜಾಸ್ತಿ ಊಟ ಮಾಡಲು ಸಹ ಆಗುತ್ತಿಲ್ಲ. ಇದರಿಂದ ನನ್ನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ವೈದ್ಯರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯ ನೀಡಬೇಕೆಂದು" ಆಗ್ರಹಿಸಿ ಡಿಎಚ್ ಒ ಕಚೇರಿ ಮುಂದೇ ಕೆಲಹೊತ್ತು ಧರಣಿ ನಡೆಸಿದ್ದಾರೆ.






