ಯಾದಗಿರಿ | ಮಕ್ಕಳ ಹಕ್ಕುಗಳು ಹಾಗೂ ನ್ಯಾಯಬದ್ಧ ದತ್ತು ಪ್ರಕ್ರಿಯೆ ಬಗ್ಗೆ ಅರಿವು ಮೂಡಿಸಿ : ಶಾಸಕ ಚೆನ್ನಾರೆಡ್ಡಿ ಪಾಟೀಲ್

ಯಾದಗಿರಿ : ಮಕ್ಕಳ ಹಕ್ಕುಗಳು ಹಾಗೂ ನ್ಯಾಯಬದ್ಧವಾದ ದತ್ತು ಪ್ರಕ್ರಿಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಸೂಕ್ತ ಅರಿವು ಮೂಡಿಸುವಂತೆ ನಗರ ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅಧಿಕಾರಿಗಳಿಗೆ ಸಲಹೆ ನೀಡಿದರು.
ನಗರದ ಪದವಿ ಕಾಲೇಜು ಮಹಾವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಮಕ್ಕಳ ಹಕ್ಕುಗಳ ಮಾಸಾಚರಣೆ ಹಾಗೂ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚೆನ್ನಾರೆಡ್ಡಿ ಪಾಟೀಲ್, ಮಕ್ಕಳ ದತ್ತು ಪ್ರಕ್ರಿಯೆ ಸುಭದ್ರವಾಗಿರಬೇಕೆಂಬ ದೃಷ್ಟಿಯಿಂದ ಸರಳ, ಸುರಕ್ಷಿತ ದತ್ತು ಪ್ರಕ್ರಿಯೆಗೆ ಕಾನೂನಿನ ಅಡಿಯಲ್ಲಿ ಅವಕಾಶವಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಿವೇದಿತಾ ಸ್ಕೂಲ್ ಆಫ್ ನರ್ಸಿಂಗ್, ಆಕ್ಸ್ಫರ್ಡ್ ಸ್ಕೂಲ್ ಆಫ್ ನರ್ಸಿಂಗ್, ಸರ್ಕಾರಿ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಮಾತನಾಡಿ, ಬಾಲನ್ಯಾಯ ಕಾಯ್ದೆ 2015 ಮತ್ತು ದತ್ತು ಅಧಿನಿಯಮ 2017ರನ್ವಯ ಕಾನೂನು ಬದ್ಧ ದತ್ತು ಪಡೆಯಲು ಅವಕಾಶವಿದೆ. ನಿರ್ಲಕ್ಷಿತ, ಪರಿತ್ಯಕ್ತ ಹಾಗೂ ಅನಾಥ ಮಕ್ಕಳ ಪಾಲನೆ ಹಾಗೂ ರಕ್ಷಣೆ ಆಗಬೇಕು. ಮಕ್ಕಳ ಹಕ್ಕುಗಳ ರಕ್ಷಣೆ ,ಪೋಕ್ಸೋ ಕಾಯ್ದೆ, ಬಾಲಕಾರ್ಮಿಕ ನಿಷೇಧ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ ಹೀಗೆ ಹಲವು ಕಾನೂನುಗಳು ಇವೆ. ಮಕ್ಕಳನ್ನು ಅನಾಥರನ್ನಾಗಿ ಮಾಡುವ, ಕಾನೂನು ಬಾಹಿರವಾಗಿ ಸಾಕುವವರ ಬಗ್ಗೆ ಮಕ್ಕಳ ಸಹಾಯವಾಣಿ ಮತ್ತು ಪೋಲಿಸ್ ಇಲಾಖೆಗೆ ದೂರು ಸಲ್ಲಿಸಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಶಿರಸಗಿ ಮಾತನಾಡಿ, ಮಕ್ಕಳ ಹಕ್ಕುಗಳ ಬಗ್ಗೆ, ಸಂಘರ್ಷ ಕ್ಕೆ ಒಳಪಟ್ಟ ಮಕ್ಕಳಿಗೆ ಎಲ್ಲ ಪರ್ಯಾಯ ಆರೈಕೆಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ನ್ಯಾಯಬದ್ಧ ದತ್ತು ಪ್ರಕ್ರಿಯೆಗಳ ಮೂಲಕ ಮಕ್ಕಳು ಕೌಟುಂಬಿಕ ವಾತಾವರಣದಲ್ಲಿ ಬೆಳೆಯಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ದಿನೇಶ್ ಕುಮಾರ್ ಮಾತನಾಡಿ, ಭ್ರೂಣಹತ್ಯೆ, ಬಾಲ್ಯವಿವಾಹ ಗಳ ಬಗ್ಗೆ ತಕ್ಷಣ ದೂರು ಸಲ್ಲಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳ ರಕ್ಷಣಾ ಘಟಕದ ದಶರಥ, ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಸುಭಾಷ್ ಚಂದ್ರ ಕೌಲಗಿ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಸಾಜೀದ್, ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಮಲ್ಲಪ್ಪ, ನಿವೇದಿತಾ ಸ್ಕೂಲ್ ಆಫ್ ನರ್ಸಿಂಗ್ ಪ್ರಾಂಶುಪಾಲ ಪ್ರಕಾಶ್, ಉಪನ್ಯಾಸಕ ಶರಣಬಸಪ್ಪ, ಡಾನ್ ಬಾಸ್ಕೋ ಸಮಾಜ ಕೇಂದ್ರ ನಿರ್ದೇಶಕ ಫಾದರ್ ಶಾಬು ಫ್ರಾನ್ಸಿಸ್, ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಮಹಮ್ಮದ್ ಅಲಿ, ಬಾಲ ನ್ಯಾಯ ಮಂಡಳಿ ಸದಸ್ಯ ನಿರ್ಮಲ ದೇವಿ, ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ, ಉಪನಿರ್ದೇಶಕ ತಿಪ್ಪಣ್ಣ ಶಿರಸಗಿ, ಡಾ ಸಾಜೀದ್, ನಿರ್ಮಲ ಸುರಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಿಶೋರ್ ಅವರು ಸಂಕಲ್ಪ ಸಂದೇಶ ವಾಚನ ಮಾಡಿದರು, ರಾಜೇಂದ್ರಕುಮಾರ್ ವಂದಿಸಿದರು.







