ಯಾದಗಿರಿ | ಏ.10 ರವರೆಗೆ ನೀರು ಹರಿಸಲು ಸಿಎಂ, ಡಿಸಿಎಂಗೆ ಶಾಸಕ ಆರ್.ವಿ.ನಾಯಕ್ ಮನವಿ

ಸುರಪುರ : ಕೃಷ್ಣಾ ಎಡದಂಡೆ ಕಾಲುವೆಗಳಿಗೆ ಏ.10ನೇ ತಾರಿಕಿನವರೆಗೆ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಶಾಸಕ ರಾಜಾ ವೇಣುಗೋಪಾಲ ನಾಯಕ್ ಮನವಿ ಮಾಡಿ ವಿನಂತಿಸಿದ್ದಾರೆ.
ಈ ಬಾರಿ ಉತ್ತಮವಾಗಿ ಮಳೆಯಾಗಿದ್ದು, ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಲಭ್ಯವಿದೆ. ಕಳೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾ. 23 ವರೆಗೆ ಎಡದಂಡೆ ಕಾಲುವೆಗಳಿಗೆ ನೀರು ಹರಿಸುವ ಚಾಲು ಬಂದ್ ಪದ್ಧತಿಯ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ರೈತರು ಹಿಂಗಾರು ಹಂಗಾಮಿನ ಬೆಳೆಗಳು ನಾಟಿ ಮಾಡುವುದು, ತಡವಾಗಿರುವುದರಿಂದ ಬೆಳೆಗಳು ಈಗ ಫಸಲು ಬಿಡುತ್ತಿದ್ದು, ಇಂತಹ ಸಂದರ್ಭದಲ್ಲಿ ನೀರು ಬಂದ್ ಆದರೆ ರೈತರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗುತ್ತದೆ. ಆದಕಾರಣ ರೈತರ ಹಿತ ಕಾಪಾಡುವ ದೃಷ್ಟಿಯಿಂದ ನಾರಾಯಣಪುರ ಎಡದಂಡೆ ಕಾಲುವೆಯ ಜಾಲಗಳಿಗೆ ಏಪ್ರಿಲ್ 10ನೇ ತಾರಿಕಿನವರೆಗೂ ನಿರಂತರವಾಗಿ ನೀರು ಹರಿಸಲು ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡುವಂತೆ ತಮ್ಮ ಪತ್ರದಲ್ಲಿ ಕೋರಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ, ವೆಂಕೋಬ್ ಯಾದವ ,ನಿಂಗಣ್ಣ ಬಾಚಿಮಟ್ಟಿ,ರಮೇಶ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ, ವೆಂಕಟೇಶ ಹೊಸಮನಿ,ನಾಗಣ್ಣ ಕಲ್ಲದೇವನಹಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.