Yadgiri | ಹತ್ತಿಕುಣಿ–ಸೌದಾಗರ್ ಜಲಾಶಯಗಳ ಆಧುನೀಕರಣಕ್ಕೆ ಶಾಸಕ ಶರಣಗೌಡರಿಂದ ಒತ್ತಾಯ : ಸಚಿವರಿಂದ ಭರವಸೆ

ಯಾದಗಿರಿ : ತಮ್ಮ ಮತಕ್ಷೇತ್ರದ ರೈತರ ಜೀವನಾಡಿಯಾಗಿರುವ ಹತ್ತಿಕುಣಿ ಮತ್ತು ಸೌದಾಗರ್ ಜಲಾಶಯಗಳ ನಾಲೆಗಳ ಆಧುನೀಕರಣಕ್ಕೆ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಶರಣಗೌಡ ಕಂದಕೂರು ಒತ್ತಾಯಿಸಿದರು.
ವಿಧಾನಸಭೆಯ ಅಧಿವೇಶನದಲ್ಲಿ ಮಂಗಳವಾರ ಮಾತನಾಡಿದ ಅವರು, ಈ ಎರಡೂ ಜಲಾಶಯಗಳು ಹಲವು ದಶಕಗಳ ಹಿಂದೆ ನಿರ್ಮಾಣಗೊಂಡಿದ್ದು ರೈತರಿಗೆ ಪ್ರಮುಖ ನೀರಾವರಿ ಮೂಲಗಳಾಗಿವೆ ಎಂದು ತಿಳಿಸಿದರು.
ಹತ್ತಿಕುಣಿ ಜಲಾಶಯವು ಸುಮಾರು 0.352 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದರೂ, 2025-26ನೇ ಸಾಲಿನಲ್ಲಿ ಕೇವಲ 12.87 ಲಕ್ಷ ರೂ. ಮಾತ್ರ ನಿರ್ವಹಣೆಗೆ ಅನುದಾನ ನೀಡಲಾಗಿದೆ ಎಂದು ಹೇಳಿದರು. ಇದೇ ರೀತಿ ಸೌದಾಗರ್ ಡ್ಯಾಂ (0.288 ಟಿಎಂಸಿ ಸಾಮರ್ಥ್ಯ) ನಿರ್ವಹಣೆಗೆ 8.50 ಲಕ್ಷ ರೂ. ಮಾತ್ರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಎರಡೂ ಯೋಜನೆಗಳಿಂದ ಒಟ್ಟು ಸುಮಾರು 9,000 ಎಕರೆ ಕೃಷಿಭೂಮಿಗೆ ನೀರು ಪೂರೈಕೆ ಆಗುತ್ತಿದ್ದು, 12 ಗ್ರಾಮಗಳ ರೈತರು ಅವಲಂಬಿತರಾಗಿದ್ದಾರೆ. ಹತ್ತಿಕುಣಿ ನಾಲೆ ಉದ್ದ ಸುಮಾರು 14 ಕಿಮೀ ಹಾಗೂ ಸೌದಾಗರ್ ನಾಲೆ 11 ಕಿಮೀ ಇದ್ದರೂ, ಇಂತಹ ಮಹತ್ವದ ಯೋಜನೆಗಳಿಗೆ ಕೇವಲ 20 ಲಕ್ಷ ರೂ. ಅನುದಾನ ನೀಡಿರುವುದು ಅಪರ್ಯಾಯವಾಗಿದೆ ಎಂದು ಸರ್ಕಾರದ ಗಮನ ಸೆಳೆದರು.
ಹತ್ತಿಕುಣಿ ಜಲಾಶಯ ಆಧುನೀಕರಣಕ್ಕೆ ಕೇಂದ್ರ ಸರ್ಕಾರದ ಎಂ-ಕ್ಯಾಡ್ ಯೋಜನೆಯಡಿ 72 ಕೋಟಿ ರೂ. ಮಂಜೂರಾಗಿದ್ದು, ರಾಜ್ಯ ಸರ್ಕಾರವು ಕ್ಯಾಬಿನೆಟ್ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದರು. ಇದೇ ರೀತಿ ಸೌದಾಗರ್ ಡ್ಯಾಂ ಆಧುನೀಕರಣಕ್ಕೂ ಸಿದ್ಧಪಡಿಸಿರುವ ಅಂದಾಜು ವೆಚ್ಚದ ವರದಿಗೆ ಅನುಮೋದನೆ ನೀಡುವಂತೆ ಕೋರಿದರು.
ಸಚಿವ ಪ್ರಿಯಾಂಕ್ ಖರ್ಗೆ ಭರವಸೆ :
ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಹತ್ತಿಕುಣಿ ಮತ್ತು ಸೌದಾಗರ್ ಜಲಾಶಯಗಳು ಜನಹಿತದ ಯೋಜನೆಗಳಾಗಿದ್ದು, ಗುರುಮಠಕಲ್ ಭಾಗದ ಅಭಿವೃದ್ಧಿಯನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಹತ್ತಿಕುಣಿ ಡ್ಯಾಂ ಆಧುನೀಕರಣಕ್ಕೆ 72 ಕೋಟಿ ರೂ. ಅನುದಾನಕ್ಕಾಗಿ ಡೀಟೈಲ್ಡ್ ಡಿಸೈನ್ ರಿಪೋರ್ಟ್ ಕೇಂದ್ರಕ್ಕೆ ಸಲ್ಲಿಸಲಾಗಿದ್ದು, ರಾಜ್ಯ ಸರ್ಕಾರವು ಶೀಘ್ರದಲ್ಲೇ ಕ್ಯಾಬಿನೆಟ್ ಅನುಮೋದನೆ ನೀಡಲಿದೆ ಎಂದು ಭರವಸೆ ನೀಡಿದರು.
ಸೌದಾಗರ್ ಡ್ಯಾಂ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ವರದಿ ಪಡೆದು ಉಪಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದರು.
“ಗುರುಮಠಕಲ್ ಅಭಿವೃದ್ಧಿಗೆ ಸಚಿವರ ಗಮನ ಇರಲಿ” :
ಶಾಸಕ ಶರಣಗೌಡ ಕಂದಕೂರು ಅವರು ಮಾತನಾಡಿ, ಸಚಿವರು ಗುರುಮಠಕಲ್ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಒಲವು ತೋರಬೇಕು. “ನಿಮ್ಮ ಒಂದು ಕಣ್ಣು ನಮ್ಮ ಕ್ಷೇತ್ರದ ಅಭಿವೃದ್ಧಿಯತ್ತ ಇರಲಿ” ಎಂದು ಮನವಿ ಮಾಡಿದರು.
“ಐ ವಿತ್ ಯೂ ಶರಣಗೌಡ” :
ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಗುರುಮಠಕಲ್ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಎರಡು ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದು “ಐ ವಿತ್ ಯೂ ಶರಣಗೌಡ” ಎಂದು ಭರವಸೆ ನೀಡಿದರು.
ಸಚಿವರ ಭರವಸೆಯಿಂದ ನಿರೀಕ್ಷೆ ಹೆಚ್ಚಳ :
ಸಚಿವರ ಭರವಸೆಗೆ ಪ್ರತಿಕ್ರಿಯಿಸಿದ ಶಾಸಕ ಕಂದಕೂರು, ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮತ್ತೊಮ್ಮೆ ಮನವಿ ಮಾಡಿ ಧನ್ಯವಾದ ಸಲ್ಲಿಸಿದರು. ಸಚಿವರ ಮಾತುಗಳಿಂದ ಜನರಲ್ಲಿ ನಿರೀಕ್ಷೆ ಹೆಚ್ಚಾಗಿದೆ ಎಂದು ಹೇಳಿದರು.






