Yadgir| ಸೆ.12ರಂದು ರಾಷ್ಟ್ರೀಯ ಲೋಕ ಅದಾಲತ್: ಹೆಚ್ಚಿನ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ

ಯಾದಗಿರಿ: ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ, ಸಾರ್ವಜನಿಕರಿಗೆ ಶೀಘ್ರ ನ್ಯಾಯ ದೊರಕಿಸುವ ಉದ್ದೇಶದಿಂದ ಸೆ.12ರಂದು ಮೂರನೇ ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗುತ್ತಿದೆ ಎಂದು ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮರುಳಸಿದ್ದರಯ್ಯ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಲೋಕ ಅದಾಲತ್ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಪ್ರಮುಖ ಉದ್ದೇಶವಾಗಿದೆ. ಇದರ ಜತೆಗೆ ಮಧ್ಯಸ್ಥಿಕೆ ಡ್ರೈವ್-3.0 ಮೂಲಕ ರಾಜಿ ಸಾಧ್ಯವಿರುವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಹಾಗೂ ಸುಪ್ರೀಂ ಕೋರ್ಟ್‌ನಿಂದ ಜಿಲ್ಲೆಯಲ್ಲಿ ಗುರುತಿಸಲ್ಪಟ್ಟಿರುವ ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದರು.
ಜುಲೈನಲ್ಲಿ ನಡೆದ ಎರಡನೇ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜಿಲ್ಲೆಯಲ್ಲಿ ಸುಮಾರು 30,763 ಪ್ರಕರಣಗಳನ್ನು ಗುರುತಿಸಲಾಗಿತ್ತು. ಅವುಗಳಲ್ಲಿ 7,567 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.
ಮುಂಬರುವ ರಾಷ್ಟ್ರೀಯ ಲೋಕ ಅದಾಲತ್ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಪ್ರತಿದಿನ ಸಂಜೆ ನ್ಯಾಯಾಲಯದ ಕಲಾಪ ಮುಗಿದ ಬಳಿಕ ಸಂಧಾನ ಸಭೆಗಳನ್ನು ನಡೆಸುತ್ತಿದ್ದಾರೆ. ಪ್ರತಿದಿನ ಸುಮಾರು ಐದು ಪ್ರಕರಣಗಳನ್ನು ಇತ್ಯರ್ಥಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಪ್ರತಿದಿನದ ಪ್ರಗತಿ ಹಾಗೂ ಪ್ರಕರಣಗಳ ಇತ್ಯರ್ಥದ ಕುರಿತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುತ್ತಿದೆ. ಈಗಾಗಲೇ ಮಧ್ಯಸ್ಥಿಕೆಗಾಗಿ 213 ಪ್ರಕರಣಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ಸುಮಾರು 40 ಪ್ರಕರಣಗಳಲ್ಲಿ ರಾಜಿ ಸಂಧಾನವಾಗಿದೆ. ಉಳಿದ ಪ್ರಕರಣಗಳಲ್ಲಿಯೂ ರಾಜಿ ಸಾಧ್ಯತೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.
ನ್ಯಾಯಾಲಯಕ್ಕೆ ಪ್ರತಿದಿನ ಸುಮಾರು 50ರಿಂದ 60 ಪ್ರಕರಣಗಳು ಬಂದಾಗ, ಅವುಗಳಲ್ಲಿ ರಾಜಿ ಸಾಧ್ಯತೆ ಇರುವ ಐದಾರು ಪ್ರಕರಣಗಳನ್ನು ಗುರುತಿಸಲಾಗುತ್ತದೆ. ನಂತರ ಪೀಠಾಸೀನ ನ್ಯಾಯಾಧೀಶರು ವಕೀಲರೊಂದಿಗೆ ಚರ್ಚಿಸಿ, ಅಗತ್ಯವಿದ್ದಲ್ಲಿ ಪಕ್ಷಕಾರರನ್ನು ಕರೆಸಿ ಪ್ರಕರಣದ ಬಗ್ಗೆ ತಿಳುವಳಿಕೆ ನೀಡುತ್ತಾರೆ. ಎರಡೂ ಪಕ್ಷಗಳು ಒಪ್ಪುವ ರೀತಿಯಲ್ಲಿ ಪ್ರಕರಣವನ್ನು ಹೇಗೆ ರಾಜಿ ಮೂಲಕ ಇತ್ಯರ್ಥಪಡಿಸಬಹುದು ಎಂಬ ಕುರಿತು ಚರ್ಚಿಸಲಾಗುತ್ತದೆ ಎಂದರು.
60 ದಿನಗಳವರೆಗೆ ಮಧ್ಯಸ್ಥಿಕೆ
ಮಧ್ಯಸ್ಥಿಕೆ ಡ್ರೈವ್-3.0 ಕೂಡ ಆರಂಭವಾಗಿದ್ದು, ರಾಜಿ ಸಾಧ್ಯವಿರುವ ಬಾಕಿ ಪ್ರಕರಣಗಳನ್ನು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಲೋಕ ಅದಾಲತ್ ಹಾಗೂ ಮಧ್ಯಸ್ಥಿಕೆಗೆ ಪ್ರತ್ಯೇಕವಾಗಿ ಹೊಸ ಪ್ರಕರಣಗಳು ಬರುವುದಿಲ್ಲ. ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನೇ ಗುರುತಿಸಿ, ರಾಜಿ ಸಾಧ್ಯತೆಯ ಆಧಾರದ ಮೇಲೆ ಸಂಬಂಧಪಟ್ಟ ಪ್ರಕ್ರಿಯೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಲೋಕ ಅದಾಲತ್‌ನಲ್ಲಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಅವಕಾಶವಿದೆ. ಆದರೆ ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ 60 ದಿನಗಳವರೆಗೆ ಪಕ್ಷಕಾರರೊಂದಿಗೆ ಚರ್ಚಿಸಿ ರಾಜಿ ಸಂಧಾನಕ್ಕೆ ಪ್ರಯತ್ನಿಸಬಹುದು. ಇದಕ್ಕಾಗಿ ತರಬೇತಿ ಪಡೆದ ವಕೀಲರನ್ನು ಮಧ್ಯಸ್ಥಿಕೆಗಾರರಾಗಿ ನೇಮಿಸಲಾಗುತ್ತದೆ. ಅವರು ಪ್ರತ್ಯೇಕ ಕೊಠಡಿಗಳಲ್ಲಿ ಪಕ್ಷಕಾರರೊಂದಿಗೆ ಮಾತುಕತೆ ನಡೆಸಿ, ಎರಡೂ ಕಡೆಯವರ ಒಪ್ಪಿಗೆಯೊಂದಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ವಿವರಿಸಿದರು.
ಮಧ್ಯಸ್ಥಿಕೆಯಲ್ಲಿ ಪಕ್ಷಕಾರರ ಇಚ್ಛೆಯಂತೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತದೆ. ಲೋಕ ಅದಾಲತ್‌ನಲ್ಲಿಯೂ ಎರಡೂ ಪಕ್ಷಗಳ ಒಪ್ಪಿಗೆಯೇ ಮುಖ್ಯವಾಗಿದ್ದು, ಕಾನೂನಿನ ವ್ಯಾಪ್ತಿಯಲ್ಲಿಯೇ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ ಎಂದರು.
ಸುಪ್ರೀಂ ಕೋರ್ಟ್‌ನ 17 ಪ್ರಕರಣಗಳಿಗೂ ವಿಶೇಷ ಗಮನ
ಸುಪ್ರೀಂ ಕೋರ್ಟ್‌ನಿಂದ ಜಿಲ್ಲೆಯಲ್ಲಿ ಗುರುತಿಸಲ್ಪಟ್ಟಿರುವ 17 ಪ್ರಕರಣಗಳನ್ನು ಇತ್ಯರ್ಥಪಡಿಸಲು ವಿಶೇಷ ಪ್ರಯತ್ನ ನಡೆಸಲಾಗುತ್ತಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಆ.21, 22 ಮತ್ತು 23ರಂದು ವಿಶೇಷ ಲೋಕ ಅದಾಲತ್ ಪ್ರಕ್ರಿಯೆ ನಡೆಯಲಿದೆ.
17 ಪ್ರಕರಣಗಳ ಪೈಕಿ ಈಗಾಗಲೇ ಒಂದು ಪ್ರಕರಣ ಇತ್ಯರ್ಥಗೊಂಡಿದೆ. ಉಳಿದ 16 ಪ್ರಕರಣಗಳಲ್ಲಿ ರಾಜಿ ಸಂಧಾನಕ್ಕೆ ನಿರಂತರ ಪ್ರಯತ್ನ ನಡೆಸಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ರಾಜಿಯಾಗುವ ಸಾಧ್ಯತೆ ಹೆಚ್ಚಿದ್ದು, ಅಂತಹ ಪ್ರಕರಣಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದು ತಿಳಿಸಿದರು.
ವಿವಿಧ ಪ್ರಕರಣಗಳಿಗೂ ಅವಕಾಶ
ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಸಿವಿಲ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ರಾಜಿಯಾಗಬಹುದಾದ ಸಣ್ಣಪುಟ್ಟ ಕ್ರಿಮಿನಲ್ ಪ್ರಕರಣಗಳು, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು, ಸಾರಿಗೆ ಸಂಬಂಧಿತ ಪ್ರಕರಣಗಳು, ರಸ್ತೆ ಅಪಘಾತ ಪ್ರಕರಣಗಳು, ಬ್ಯಾಂಕ್ ಪ್ರಕರಣಗಳು ಹಾಗೂ ಹಣಕಾಸು ವಸೂಲಾತಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಅವಕಾಶವಿದೆ ಎಂದು ಹೇಳಿದರು.
ಯಾವುದೇ ಸಾರ್ವಜನಿಕರು ತಮ್ಮ ಪ್ರಕರಣವನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಲು ಬಯಸಿದರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದು. ಸಂಬಂಧಪಟ್ಟ ಎದುರುದಾರ ಪಕ್ಷಕಾರರಿಗೆ ಮಾಹಿತಿ ನೀಡಿ, ಪ್ರಕರಣದ ಕುರಿತು ಮುಂಚಿತವಾಗಿ ಚರ್ಚೆ ನಡೆಸಿ ಸೆ.12ರಂದು ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಎಂದರು.
ಎಲ್ಲ ಕಕ್ಷಿದಾರರು ಹಾಗೂ ವಕೀಲರು ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಇದ್ದರು.






