ಯಾದಗಿರಿ: ಹಿರಿಯ ನಾಗರಿಕರಿಗೆ ಎನ್‌ಸಿಡಿ ತಪಾಸಣೆ ಶಿಬಿರ

ಯಾದಗಿರಿ: ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ನಗರದ ಹೊಸ ಬಸ್ ನಿಲ್ದಾಣದಲ್ಲಿರುವ ನಮ್ಮ ಕ್ಲಿನಿಕ್ ವತಿಯಿಂದ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದ ಸದಸ್ಯರಿಗಾಗಿ ಎನ್‌ಸಿಡಿ (ಅಸಂಕ್ರಮಣೀಯ ರೋಗ) ತಪಾಸಣೆ ಮತ್ತು ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಯಿತು.
ನಗರದ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ನಡೆದ ಶಿಬಿರದಲ್ಲಿ ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಡಾ. ಸೌಮ್ಯ ಎಸ್.ವಿ. ಭಾವಿ ಅವರು ಸುಮಾರು 70 ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ನಡೆಸಿದರು. ಬಿಪಿ, ಶುಗರ್ ತಪಾಸಣೆ ಮಾಡಿ ಅಗತ್ಯ ಔಷಧಿಗಳನ್ನು ವಿತರಿಸಿದರು.
ತಪಾಸಣೆಯ ವೇಳೆ ನಾಲ್ವರು ಹೊಸದಾಗಿ ರಕ್ತದೊತ್ತಡದಿಂದ ಬಳಲುತ್ತಿರುವುದು ಪತ್ತೆಯಾಗಿ, ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಯಿತು. ಜೊತೆಗೆ ಕೆಮ್ಮು, ನೆಗಡಿ, ಮೈ-ಕೈ ನೋವು ಮೊದಲಾದ ಇತರೆ ತೊಂದರೆಗಳಿಗೂ ಔಷಧ ವಿತರಣೆ ನಡೆಯಿತು.
ಹಿರಿಯ ನಾಗರಿಕರ ಆರೋಗ್ಯ ಕಾಪಾಡಿಕೊಳ್ಳುವ ಹಿನ್ನೆಲೆಯಲ್ಲಿ ಡಾ. ಸೌಮ್ಯ ಅವರು, “ಪ್ರತೀ ತಿಂಗಳು ಆರೋಗ್ಯ ತಪಾಸಣೆ ನಡೆಸಿ, ಯೋಗ ಹಾಗೂ ವ್ಯಾಯಾಮದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ದೀರ್ಘಕಾಲೀನ ಆರೋಗ್ಯ ಸಾಧ್ಯ,” ಎಂದು ಸಲಹೆ ನೀಡಿದರು.
ಶಿಬಿರದ ಯಶಸ್ಸಿಗೆ ನರ್ಸಿಂಗ್ ಅಧಿಕಾರಿ ಅನ್ನಪೂರ್ಣ ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಿಮಾಳಮ್ಮ ಸಹಕರಿಸಿದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಂಡಪ್ಪ ಆಕಳ ಸೇರಿದಂತೆ ಹಲವು ಹಿರಿಯ ನಾಗರಿಕರು ಶಿಬಿರದಲ್ಲಿ ಭಾಗವಹಿಸಿದ್ದರು.







